ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಐತಿಹಾಸಿಕ ಕ್ಷಣಕ್ಕಾಗಿ ಸಾಕ್ಷಿಯಾಗಲು ಮಂಗಳವಾರ ಹಾಗೂ ಬುಧವಾರ ಮನೆಮನೆಗಳಲ್ಲಿ ದೀಪ ಬೆಳಗಿಸಿ ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಮಂದಿರದ ಭೂಮಿ ಪೂಜೆ ಕಾರ್ಯಕ್ರಮ ಸಿದ್ಧತೆಗಳನ್ನು ಅವರು ಪರಿಶೀಲನೆ ನಡೆಸಿದರು. ಆಗಸ್ಟ್ 4- 5 ರಂದು ಜನರು ಮಣ್ಣಿನ ಹಣತೆಗಳನ್ನು ಬೆಳಗುವ ಮೂಲಕ ಶ್ರೀರಾಮಮಂದಿರ ನಿರ್ಮಾಣದ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ; ಎಂಟು ನಗರಗಳಲ್ಲಿ ಜಾರಿಯಲ್ಲಿದೆ ದೇಶೀಯ ಕರೊನಾ ಲಸಿಕೆ ಕ್ಲಿನಿಕಲ್ ಟ್ರಯಲ್; ಹೇಗಿದೆ ವ್ಯಾಕ್ಸಿನ್ ಪಡೆದವರ ಆರೋಗ್ಯ?
ಧಾರ್ಮಿಕ ಮುಖಂಡರು ದೇಗುಲಗಳನ್ನು ಶೃಂಗರಿಸಲಿ, ದೀಪೋತ್ಸವಗಳನ್ನು ಹಮ್ಮಿಕೊಳ್ಳಲಿ, ಅಖಂಡ ರಾಮಾಯಣ ಪಠಣವನ್ನು ಏರ್ಪಡಿಸಲಿ. ಹಿರಿಯರು ರಾಮ ಮಂದಿರಕ್ಕಾಗಿ ಮಾಡಿದ ತ್ಯಾಗವನ್ನು ನೆನೆಯಲಿ ಕೋರಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಯೋಗಿ ಆದಿತ್ಯನಾಥ, ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯುವುದನ್ನು ಕಾಂಗ್ರೆಸ್ ಎಂದಿಗೂ ಬಯಸಲಿಲ್ಲ. ವಿವಾದ ಬಗೆಹರಿಯುವುದು ಅವರಿಗೆ ಬೇಕಾಗಿರಲಿಲ್ಲ. ಹೀಗಾಗಿ ಜನರನ್ನು ಧರ್ಮ, ಜಾತಿ, ನಂಬಿಕೆಗಳ ಆಧಾರದಲ್ಲಿ ವಿಭಜಿಸಿದರು ಎಂದು ಸಿಎಂ ಟೀಕಿಸಿದರು.
ಕೋವಿಡ್ 19 ನಿಯಂತ್ರಿಸುವುದೇ ಉತ್ತರಪ್ರದೇಶ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ಜನರನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಿದರು.