Sunita Williams: ಎಂಟು ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲೇ ಸಿಲುಕಿದ್ದ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಭೂಮಿಗೆ ಮರಳಲು ಸಿದ್ಧವಾಗಿದ್ದಾರೆ. ಕಳೆದ ವರ್ಷ ಜೂನ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವಾಕರ್ಷಣೆಯಲ್ಲಿರುವ ಈ ಜೋಡಿ, ಭೂಮಿಗೆ ಹಿಂತಿರುಗಿದಾಗ ವಿವಿಧ ದೈಹಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ, ಸಣ್ಣ ಪೆನ್ಸಿಲ್ ಎತ್ತುವುದಕ್ಕೂ ಅವರಿಗೆ ಕಷ್ಟವಾಗುತ್ತದೆ.
ಅಂದಹಾಗೆ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಅವರು ಎಂಟು ದಿನಗಳ ಕಾರ್ಯಾಚರಣೆಗಾಗಿ 2024ರ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದರು. ಒಂದು ವಾರದ ಬಳಿಕ ಭೂಮಿಗೆ ಮರಳಬೇಕಿತ್ತು. ಆದರೆ, ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ, ಈ ಜೋಡಿಯು ನಿರೀಕ್ಷಿತ ದಿನಾಂಕದಂದು ಭೂಮಿಗೆ ಮರಳಲು ಸಾಧ್ಯವಾಗಲಿಲ್ಲ. ಇದರೊಂದಿಗೆ ISS ನಲ್ಲಿ ಸಿಲುಕಿಕೊಂಡಿದ್ದರು. ಇದೀಗ ಮಾರ್ಚ್ 19ರಂದು ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಇಬ್ಬರು ಭೂಮಿಗೆ ಮರಳಲಿದ್ದಾರೆ.
ಅನೇಕ ತಿಂಗಳವರೆಗೆ ಶೂನ್ಯ ಗುರುತ್ವಾಕರ್ಷಣೆಯಲ್ಲಿದ್ದ ಇಬ್ಬರಿಗೂ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಇಬ್ಬರು ಸಾಕಷ್ಟು ಅಸ್ವಸ್ಥತೆಯನ್ನು ಸಹ ಎದುರಿಸಬೇಕಾಗುತ್ತದೆ. ಈ ಬಗ್ಗೆ ಬಚ್ ವಿಲ್ಮೋರ್ ಅವರು ಮಾತನಾಡಿದ್ದು, ಭೂಮಿಗೆ ಹಿಂತಿರುಗಿದಾಗ ಗುರುತ್ವಾಕರ್ಷಣೆಯು ಎಲ್ಲವನ್ನೂ ಕಡಿಮೆ ಮಾಡುತ್ತದೆ. ದೇಹದ ದ್ರವಗಳು ಸಹ ಒತ್ತಡದ ವ್ಯತ್ಯಾಸವನ್ನು ಅನುಭವಿಸುತ್ತವೆ. ಪೆನ್ಸಿಲ್ ಎತ್ತುವುದು ಸಹ ದೊಡ್ಡ ವ್ಯಾಯಾಮದಂತೆ ಭಾಸವಾಗುತ್ತದೆ ಎಂದರು.
ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಅವರನ್ನು ಮರಳಿ ಕರೆತರುವ ಕಾರ್ಯಾಚರಣೆಗಾಗಿ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆ ಮಾರ್ಚ್ 12ರಂದು ಉಡಾವಣೆಯಾಗಲಿದ್ದು, ಮಾರ್ಚ್ 19 ರಂದು ಮರಳಿ ಭೂಮಿಯನ್ನು ತಲುಪಲಿದೆ. ಬಾಹ್ಯಾಕಾಶ ನಿಲ್ದಾಣದ ಪ್ರಸ್ತುತ ಕಮಾಂಡರ್ ಸುನೀತಾ ವಿಲಿಯಮ್ಸ್, ಕ್ರೂ - 10 ಕಾರ್ಯಾಚರಣೆಯ ಹೊಸ ಕಮಾಂಡರ್‌ಗೆ ಅಧಿಕಾರವನ್ನು ಹಸ್ತಾಂತರಿಸಿದ ನಂತರ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅನ್‌ಲಾಕ್ ಮಾಡಲಿದ್ದಾರೆ.
ಗಗನಯಾತ್ರಿಗಳು ಯಾವುದೋ ಕಾರಣಕ್ಕಾಗಿ ಬಾಹ್ಯಾಕಾಶ ನಿಲ್ದಾಣದಲ್ಲೇ ಸಿಲುಕಿಕೊಂಡರೆ, ಅವರು ಸುಲಭವಾಗಿ 300 ರಿಂದ 400 ದಿನಗಳವರೆಗೆ ಅಂದರೆ, ಒಂದು ವರ್ಷ ಆರಾಮಾಗಿ ಅಲ್ಲಿಯೇ ಉಳಿಯಬಹುದು. ಬಾಹ್ಯಾಕಾಶದಲ್ಲಿ ಹೆಚ್ಚು ಸಮಯ ಕಳೆದ ದಾಖಲೆ ರಷ್ಯಾದ ಗಗನಯಾತ್ರಿ ವ್ಯಾಲೆರಿ ಪಾಲಿಯಕೋವ್ ಅವರ ಹೆಸರಿನಲ್ಲಿದೆ. ಅವರು 1994ರ ಜನವರಿಯಿಂದ 1995ರ ಮಾರ್ಚ್ವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು 437 ದಿನಗಳನ್ನು ಕಳೆದರು.
ಬಾಹ್ಯಾಕಾಶದ ವಾತಾವರಣವೇ ತುಂಬಾ ವಿಭಿನ್ನ. ಈ ವಾತಾವರಣದಲ್ಲಿ ಒತ್ತಡದ ಅನುಪಸ್ಥಿತಿ ಇರುತ್ತದೆ ಮತ್ತು ವಿಪರೀತ ನಿರ್ವಾತ ಪರಿಸ್ಥಿತಿ ಇರುತ್ತದೆ. ಹೀಗಾಗಿ ಎಚ್ಚರಿಕೆಯ ನಡೆ ಅತ್ಯಗತ್ಯ. ಗಗನಯಾತ್ರಿಗಳ ಉಳಿವಿಗಾಗಿ ಅಗತ್ಯವಾದ ಆಮ್ಲಜನಕ ಮಟ್ಟ ಸೇರಿದಂತೆ ನಿಯಂತ್ರಿತ ವಾತಾವರಣವನ್ನು ಒದಗಿಸಲು ಬಾಹ್ಯಾಕಾಶ ನೌಕೆಯಂತಹ ವ್ಯವಸ್ಥೆಗಳನ್ನು ಅಂಬಿಸಿರುತ್ತಾರೆ. ಈ ವ್ಯವಸ್ಥೆಯಲ್ಲಿ ಯಾವುದೇ ಸಣ್ಣ ವೈಫಲ್ಯ ಕಾಣಿಸಿಕೊಂಡರು ಗಂಭೀರ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು. ಅಲ್ಲದೆ, ಸಾವು ಸಂಭವಿಸುವ ಸಾಧ್ಯತೆಯೂ ಇದೆ.
ಬಾಹ್ಯಾಕಾಶದಲ್ಲಿರುವ ವಿಶಿಷ್ಟ ಪರಿಸರವು ದೇಹದಲ್ಲಿ ದ್ರವದ ಬದಲಾವಣೆಗಳಿಗೆ ಕಾರಣವಾಗುತ್ತದೆ. ದೇಹದೊಳಗಿನ ದ್ರವಗಳು ಮೇಲಿನ ದೇಹದ ಮೇಲ್ಭಾಗಕ್ಕೆ ಮರುಹಂಚಿಕೆಯಾಗುತ್ತವೆ. ಇದರಿಂದ ಇಂಟ್ರಾಕ್ರೇನಿಯಲ್ ಒತ್ತಡ ಹೆಚ್ಚಾಗಬಹುದು. ಹೀಗಾದಲ್ಲಿ ತಲೆನೋವು, ದೃಷ್ಟಿಹೀನತೆ ಮತ್ತು ಮೆದುಳು ಹಾನಿಯಾಗಬಹುದು. ಅಲ್ಲದೆ, ಬಾಹ್ಯಾಕಾಶದಲ್ಲಿ ಕಾಸ್ಮಿಕ್ ವಿಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಡಿಎನ್ಎಗೂ ಹಾನಿಯಾಗಬಹುದು. ಇದರಿಂದ ಕ್ಯಾನ್ಸರ್ ಸೇರಿದಂತೆ ಇತರೆ ನರವೈಜ್ಞಾನಿಕ ಪರಿಸ್ಥಿತಿಗಳು ಸಹ ಎದುರಾಗಬಹುದು. (ಏಜೆನ್ಸೀಸ್)