ನಿರುಕಿಸುತ ತಳಿರಲರ-ಮಂಕುತಿಮ್ಮ||817||
ಎರೆ ನೀರ, ಸುರಿ ಗೊಬ್ಬರವ, ಕೆದಕು ಪಾತಿಯನು|
ತರಿಯಬೇಡ ಎಲೆ ಕಡ್ಡಿಗಳ ಪರೀಕ್ಷಣಕೆ||
ಮರವನ್ನು ತಿಳಿಯುವುದಕ್ಕಾಗಿ ಅದರ ಬುಡವನ್ನು ಕೀಳಬೇಡ. ಅದರ ಎಲೆ ರೆಂಬೆ ಕೊಂಬೆಗಳನ್ನು ಕಡಿಯಬೇಡ. ಅದರ ಬದಲಾಗಿ ಅದಕ್ಕೆ ನೀರು, ಗೊಬ್ಬರಗಳನ್ನು ಹಾಕು. ನೀರಿನ ಪಾತಿಯನ್ನು ಸರಿಪಡಿಸು. ಅದರಲ್ಲಿ ಮೂಡುವ ಚಿಗುರು ಮತ್ತು ಹೂವಿನ ಮೊಗ್ಗನ್ನು ಗಮನಿಸು. ಹೀಗೆ ಮರವನ್ನು ತಿಳಿದುಕೋ ಎನ್ನುತ್ತದೆ ಈ ಕಗ್ಗ.
ಒಂದು ಮರದ ಬಗೆಗೆ ತಿಳಿದುಕೊಳ್ಳುವುದಕ್ಕೆ ಅದನ್ನು ಕಡಿದು, ಬುಡ-ಬೇರುಗಳನ್ನು ಕೆದಕಿ ನೋಡುವುದು ಸರಿಯೇನು? ಅದರ ರೆಂಬೆಕೊಂಬೆ, ಎಲೆಗಳನ್ನು ತರಿದು ಪರೀಕ್ಷಿಸಿದರೆ ಪೂರ್ತಿ ಮರದ ಪರಿಚಯವಾಗಬಹುದೇನು? ಸಸ್ಯ ವಿಜ್ಞಾನಿಗಳು ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸುವುದಕ್ಕಾಗಿ ಮರದ ಕೆಲವು ಭಾಗಗಳನ್ನು ಬಳಸಬಹುದು. ಆದರೆ ಗಿಡ-ಮರಗಳು ಅಳಿದು ಹೋಗುವಂತೆ, ಅವುಗಳಿಗೆ ಹಾನಿಯಾಗುವಂತೆ ಮಾಡಲಾರರು. ಅವರ ಪರೀಕ್ಷಣಕ್ಕೆ ಸರಿಯಾದ ಕಾರಣವಿದೆ. ವೈಜ್ಞಾನಿಕವಾದ ಹಿನ್ನಲೆಯೊಂದಿಗೆ ಮರದ ವಿಶೇಷತೆ ಪ್ರಕಟವಾಗುತ್ತದೆ. ಆದರೂ ಮರದ ಸಂಪೂರ್ಣ ವಿವರವು ನಿಖರವಾಗಿ ಸಿಗುತ್ತದೆ ಎನ್ನುವುದಕ್ಕಿಲ್ಲ. ಸಾಮಾನ್ಯ ವ್ಯಕ್ತಿಯೊಬ್ಬ ಮರವನ್ನು ತಿಳಿಯಲು ಅದನ್ನು ಕಡಿಯುವ ಕೆಲಸಕ್ಕೆ ತೊಡಗಿದನೆಂದರೆ ಅದು ಮೂರ್ಖತನವಾದೀತು. ಅದರ ಬದಲಾಗಿ ಆ ಮರಕ್ಕೆ ನೀರು-ಗೊಬ್ಬರಗಳನ್ನು ಹಾಕಿ, ನೀರು ಸರಾಗವಾಗಿ ಸಾಗಲು, ಇಂಗಲು ಪಾತಿಗಳನ್ನು ಮಾಡಿ ಮರವನ್ನು ಪ್ರೀತಿಯಿಂದ ಆರೈಕೆ ಮಾಡಿದರೆ ಅದರಲ್ಲಿ ಮೂಡುವ ಚಿಗುರು, ಅರಳುವ ಹೂವು, ದೊರೆಯುವ ಕಾಯಿ-ಹಣ್ಣುಗಳ ಮೂಲಕ ಮರವನ್ನು ತಿಳಿಯಬಹುದು.
ವಿಶ್ವವೂ ಒಂದು ವಿಶಾಲವಾದ ಜೀವವೃಕ್ಷ. ಇದನ್ನು ಆಶ್ರಯಿಸಿಯೇ ಲೋಕಜೀವಿತ. ಜಗದ ಜೀವರುಗಳೆಲ್ಲ ಆಶ್ರಯವನ್ನು ಪಡೆದಿರುವ ವಿಶ್ವವೆಂಬ ವೃಕ್ಷವನ್ನು ತಿಳಿಯಲೆತ್ನಿಸುವುದೆ ಜೀವನ. ಆಕಸ್ಮಿಕಗಳನ್ನು ಎದುರಿಸುತ್ತ ಭರವಸೆಯೊಂದಿಗೆ ಮುನ್ನಡೆಯುವ ಬಾಳಪಯಣದಲ್ಲಿ ಎಲ್ಲವೂ ವ್ಯಕ್ತಿಯ ಮನೋಭಿಷ್ಠದಂತೆಯೇ ನಡೆಯುವುದಿಲ್ಲ. ಸಫಲತೆಯ ಪ್ರಯತ್ನಗಳೆಲ್ಲವೂ ವಿಫಲವಾಗುವುದುಂಟು. ವೈಫಲ್ಯವನ್ನು ಎದುರುನೋಡುತ್ತಿದ್ದಾಗ ಯಶಸ್ಸು ಅರಸಿ ಬರುವುದುಂಟು. ಕಾಲದ ಓಟದಲ್ಲಿ ಸದಾ ಬದಲಾವಣೆಗೆ ಒಳಗಾಗುವ ಪ್ರಕೃತಿಯು ಬಗೆಹರಿಯದ ಒಗಟಾಗಿ ಕಾಡುತ್ತದೆ. ರಹಸ್ಯವಾದುದೊಂದು ಅವ್ಯಕ್ತವಾಗಿಯೇ ಕಾರ್ಯಾಚರಿಸುತ್ತಿರುವಂತೆ ಭಾಸವಾಗುತ್ತದೆ. ಜಗದ ಜೀವಿತದ ಆಗುಹೋಗುಗಳನ್ನು ತಡೆಯುವುದು, ನಿಯಂತ್ರಿಸುವುದು ಮನುಷ್ಯರಿಗೆ ಅಸಾಧ್ಯ.
ವಿಶ್ವಕ್ಕೆ ಅದರದ್ದೇ ಆದ ರೀತಿ-ನೀತಿ, ಧರ್ಮ-ಕರ್ಮಗಳಿವೆ. ಜಗದ ಜೀವರುಗಳು ಅದನ್ನು ಅನುಸರಿಸುತ್ತ ಬಂದಿದ್ದು ಅದುವೆ ಪ್ರಕೃತಿಯಾಗಿ, ಜೀವನ ಶೈಲಿಯಾಗಿ ಸ್ವೀಕರಿಸಲ್ಪಟ್ಟಿದೆ. ಲೋಕದಲ್ಲಿ ಎಲ್ಲವೂ ಅದ್ಭುತವಾಗಿ ಸಂಯೋಜಿಸಲ್ಪಟ್ಟಿದೆ, ಬೆರಗುಗೊಳಿಸುವ ಸಮನ್ವಯವಿದೆ. ಬುವಿಯಲ್ಲಿರುವ ವಿವಿಧ ಋತುಗಳು, ವೈವಿಧ್ಯಗಳು, ಪರಸ್ಪರ ಅವಲಂಬಿತವಾಗಿರುವ ಜೀವಚಕ್ರಗಳನ್ನು ಗಮನಿಸಿದರೆ ವಿಶ್ವವೇ ಒಂದು ವಿಸ್ಮಯದಂತೆ ಕಾಣುತ್ತದೆ. ಈ ಸಂಯೋಜನೆ, ವಿಸ್ತಾರ, ವಿಶೇಷಗಳನ್ನು ತಿಳಿಯುವುದಕ್ಕೆ ನಾಶದ ಮಾರ್ಗವನ್ನು ಅನುಸರಿಸುವುದಲ್ಲ. ವ್ಯವಸ್ಥಿತವಾಗಿರುವುದನ್ನು ಹಾಳುಗೆಡಹಿದರೆ ಏನಾಗುತ್ತದೆ ಎಂದು ಪರೀಕ್ಷಿಸಲು ಹೊರಡುವುದು ಮೂರ್ಖತನ. ಶತಶತಮಾನಗಳಿಂದ ಸ್ವೀಕೃತವಾದ ಜೀವನ ಶೈಲಿ, ಶಾಸ್ತ್ರ-ಸಂಪ್ರದಾಯ, ಪ್ರಕೃತಿಯ ಸಹಜ ವರ್ತನೆ, ಸಮೃದ್ಧವಾಗಿರುವ ಜೀವ ವೈವಿಧ್ಯವನ್ನು ನಿರಾಕರಿಸಿ, ಅವುಗಳಿಗೆ ಹಾನಿಯನ್ನು ಉಂಟುಮಾಡಿ ಹೊಸತನವನ್ನು ಪಡೆಯುವುದಕ್ಕುಂಟೆ? ಇದರಿಂದ ಸ್ವಯಂನಾಶವಾದೀತು. ಅದರ ಬದಲು ಲೋಕಜೀವನದ ಸಮೃದ್ಧಿಗಾಗಿ ಪ್ರಯತ್ನಿಸಬೇಕು. ಸುತ್ತಲಿರುವ ವಿಸ್ಮಯಗಳನ್ನು ಯಾವುದೇ ಸಂದೇಹ, ಪೂರ್ವಗ್ರಹಗಳಿಲ್ಲದೆ ಮುಗ್ಧಮನಸ್ಸಿನಿಂದ ಗಮನಿಸುತ್ತ ಆನಂದವನ್ನು ಹೊಂದುವುದು ಸಾಧ್ಯವಾಗಬೇಕು.
ವಿಶ್ವಸೃಷ್ಟಿಯ ಅಗಾಧತೆಯನ್ನು, ಅದರ ಹಿಂದಿರುವ ಅವ್ಯಕ್ತ ಚೈತನ್ಯವನ್ನು ಮನಗಂಡ ಹಿರಿಯರು ಅದನ್ನು ಅರ್ಥೈಸಿಕೊಳ್ಳುವುದಕ್ಕೆ ಅನುಕೂಲವಾಗುವಂಥ ಜೀವನ ಶೈಲಿಯನ್ನು ರೂಪಿಸಿದ್ದಾರೆ. ತಮ್ಮ ಸತ್ಯಾನುಭವಗಳನ್ನು ದಾಖಲಿಸಿದ್ದಾರೆ. ಅವೆಲ್ಲವನ್ನೂ ಪರೀಕ್ಷಿಸುವ ನೆಪದಿಂದ ಹಾಳುಗೆಡಹಿದರೆ ಹೊಸದಾಗಿ ಯಾವ ಅರಿವನ್ನೂ ಪಡೆಯಲು ಸಾಧ್ಯವಿಲ್ಲ.
ಜಗತ್ತನ್ನು ಅರ್ಥೈಸಿಕೊಳ್ಳಲು ಬಾಹ್ಯಕರಣಗಳಷ್ಟೇ ಸಾಲದು ಅರಿವಿನ ಒಳಗಣ್ಣೂ ಬೇಕು. ಜೀವನವು ನಶ್ವರವೆಂಬ ಧೋರಣೆ, ಅಭಾವ ವೈರಾಗ್ಯ, ವಿರಕ್ತಿಯ ಆಚರಣೆಯ ಮೂಲಕ ಬದುಕನ್ನು ತುಚ್ಛವಾಗಿ ಕಂಡರೆ ಜೀವವೃಕ್ಷವನ್ನೇ ಕಡೆಗಣಿಸಿದಂತೆ. ಅಮಿತ ಜೀವನೋತ್ಸಾಹ, ಪ್ರತಿಫಲಾಪೇಕ್ಷೆ ಇರದ ಕರ್ತವ್ಯ ನಿಷ್ಠೆ, ಧರ್ವಚರಣೆಗಳು ಜೀವನವನ್ನು ಅರ್ಥಪೂರ್ಣವಾಗಿಸುತ್ತವೆ. ಜೀವನದ ಕಹಿ-ಸಿಹಿ ಅನುಭವಗಳು ನೀಡುವ ಅರಿವನ್ನು ಗ್ರಹಿಸುತ್ತ ಹೋದರೆ ವ್ಯಕ್ತಿತ್ವವು ವಿಕಾಸಗೊಳ್ಳುತ್ತದೆ.