ನ್ಯೂಸ್

ಬೆಂಗಳೂರು ಐಟಿ ಉದ್ಯೋಗಿ ಕೊಲೆ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

ನವದೆಹಲಿ: ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿ ಒಂದರ ಉದ್ಯೋಗಿ ಪ್ರತಿಭಾ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕ್ಯಾಬ್​ ಚಾಲಕ ಶಿವಕುಮಾರ್​ಗೆ ಸುಪ್ರೀಂ ಕೋರ್ಟ್​ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ನ್ಯಾಯಮೂರ್ತಿಗಳಾದ ಅಭಯ್​.ಎಸ್​.ಓಕಾ ಹಾಗೂ ರಾಜೇಶ್​ ಬಿಂದಲ್​ ಅವರಿದ್ದ ದ್ವಿಸದಸ್ಯ ಪೀಠವು ಆರೋಪಿ 30 ವರ್ಷಗಳ ಸೆರೆವಾಸ ಪೂರ್ಣಗೊಳಿಸುವವರೆಗೂ ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ ಎಂದು ಆದೇಶಿಸಿದೆ.

ಪ್ರತಿಷ್ಠಿತಿ ಐಟಿ ಕಂಪನಿ ಒಂದರಲ್ಲಿ ಉದ್ಯೋಗ ಮಾಡುತ್ತ ವಿವಾಹಿತ ಮಹಿಳೆ ಸುಂದರ ಜೀವನವನ್ನ ಕಟ್ಟಿಕೊಂಡಿದ್ದರು. ಆರೋಪಿಯ ದುಷ್ಕೃತ್ಯದಿಂದಾಗಿ ಆಕೆಯ ಜೀವನ ಚಿಕ್ಕ ವಯಸ್ಸಿನಲ್ಲೇ ಅಂತ್ಯಗೊಂಡಿದೆ ಎಂದು ನ್ಯಾಯಪೀಠ ಹೇಳಿದೆ.

ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೂ ಬದುಕಿರುವವರೆಗೂ ಸೆರೆವಾಸ ಅನುಭವಿಸಬೇಕು ಎಂದು ವಿಚಾರಣಾಧೀನ ನ್ಯಾಯಾಲಯ ತೀರ್ಪು ನೀಡಿತ್ತು. ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್​​ ಎತ್ತಿ ಹಿಡಿದಿತ್ತು. ರಾಜ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರೋಪಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದ.