ನವದೆಹಲಿ: ಭಾರತೀಯ ಉದ್ಯಮಿ ಗೌತಮ್ ಅದಾನಿ ಒಡೆತನದ ಕಂಪನಿಯ ಅದಾನಿ ಗ್ರೂಪ್ ಷೇರುಗಳಲ್ಲಿ ಭಾರತೀಯ ಜೀವ ವಿಮಾ ನಿಗಮ(LIC) 3.9 ಅಮೆರಿಕನ್ ಡಾಲರ್ ಹೂಡಿಕೆ ಮಾಡಿದ್ದು, ಅದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ ಎಂಬ ಅಮೆರಿಕಾದ ದಿನಪತ್ರಿಕೆ ವಾಷಿಂಗ್ಟನ್ ಫೋಷ್ಟ್ ವರದಿ ಮಾಡಿದೆ. ಇಂದು(ಅ. 25) ಈ ವರದಿಯನ್ನು ತಿರಸ್ಕರಿಸಿರುವ ಎಲ್‌ಐಸಿ ಇದೊಂದು ಸುಳ್ಳು, ಆಧಾರರಹಿತ ಎಂದು ತಳ್ಳಿ ಹಾಕಿದೆ.
ಈ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಎಲ್‌ಐಸಿ, ಪ್ರಮುಖ ಅಂತಾರಾಷ್ಟ್ರೀಯ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ತನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಮತ್ತು ಸಂಪೂರ್ಣವಾಗಿ ಆಧಾರರಹಿತ. ಈ ವರದಿಯ ವಿಷಯಗಳು ಸತ್ಯಕ್ಕೆ ದೂರವಾಗಿವೆ. ತನ್ನ ಹೂಡಿಕೆ ನಿರ್ಧಾರಗಳು ಕಂಪನಿಯ ನಿಯಮಗಳಿಗೆ ಸಂಪೂರ್ಣವಾಗಿ ಅನುಗುಣವಾಗಿವೆ. ಹೂಡಿಕೆ ಅಂಶಗಳ ಮೇಲೆ ಹೊರಗಿನವರು ಯಾರೂ ಪ್ರಭಾವ ಬೀರಿಲ್ಲ ಎಂದು ಹೇಳಿದೆ.
ಆಡಳಿತ ಮಂಡಳಿ ಅನುಮೋದಿಸಿದ ನೀತಿಗಳ ಪ್ರಕಾರ ಎಲ್‌ಐಸಿ ತನ್ನ ಹೂಡಿಕೆ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುತ್ತದೆ. ಅಂತಹ ನಿರ್ಧಾರಗಳಲ್ಲಿ ಬೇರೆ ಯಾವುದೇ ಸಂಸ್ಥೆಯು ಯಾವುದೇ ಪಾತ್ರವನ್ನು ಹೊಂದಿಲ್ಲ ಮತ್ತು ಹೊಂದಿರುವುದಿಲ್ಲ. ಎಲ್‌ಐಸಿ ತನ್ನ ಷೇರುದಾರರ ಹಿತಾಸಕ್ತಿಗಾಗಿ ಯಾವಾಗಲೂ ಅತ್ಯುನ್ನತ ಮಟ್ಟದ ಕಾಳಜಿಯನ್ನು ಹೊಂದಿದೆ ಎಂದು ಎಲ್‌ಐಸಿ ಸ್ಪಷ್ಟವಾಗಿ ಹೇಳಿದೆ.
ವಾಷಿಂಗ್ಟನ್ ಪೋಸ್ಟ್ ಆರೋಪವೇನು?
ಸುಮಾರು $90 ಬಿಲಿಯನ್ ನಿವ್ವಳ ಮೌಲ್ಯ ಹೊಂದಿರುವ ಭಾರತದ ಎರಡನೇ ಶ್ರೀಮಂತ ಗೌತಮ್ ಅದಾನಿ ಮೇಲೆ ಕಳೆದ ವರ್ಷ ಅಮೆರಿಕಾದ ಅಧಿಕಾರಿಗಳು ಲಂಚ ಮತ್ತು ವಂಚನೆ ಆರೋಪ ಮಾಡಿದ್ದರು. ಅವರಿಗೆ ಸಾಲ ಕೊಡಲು ಅಮೆರಿಕನ್ ಮತ್ತು ಯುರೋಪಿಯನ್ ಬ್ಯಾಂಕುಗಳು ಹಿಂಜರಿಯುತ್ತಿದ್ದವು.
ಆದರೆ ಈ ವರ್ಷದ ಆರಂಭದ ಮೇ ತಿಂಗಳಿನಲ್ಲಿ ಭಾರತದ ಸರ್ಕಾರ ತನ್ನದೇ ಒಂದು ಯೋಜನೆಯನ್ನು ರೂಪಿಸಿ ಭಾರತದ ಬಡ ಮತ್ತು ಗ್ರಾಮೀಣ ಜನರಿಗೆ ಜೀವ ವಿಮೆಯನ್ನು ಒದಗಿಸುವ ಎಲ್ಐಸಿಯಿಂದ ಸುಮಾರು 3.9 ಬಿಲಿಯನ್ ಅಮೆರಿಕನ್ ಡಾಲರ್(32,000 ಸಾವಿರ ಕೋಟಿ ರೂ.) ಹಣವನ್ನು ಅದಾನಿ ಗ್ರೂಪ್ ಒಡೆತನ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಸ್ತಾವನೆ ಸಿದ್ದಪಡಿಸಿ ಜಾರಿಗೆ ತಂದಿತ್ತು, ಈ ಬಗ್ಗೆ ದಾಖಲೆಗಳಿವೆ ಎಂದು ವಾಷಿಂಗ್ಟನ್ ಪೋಸ್ಟ್ ತನ್ನ ಲೇಖನದಲ್ಲಿ ಆರೋಪ ಮಾಡಿತ್ತು. (ಏಜೆನ್ಸೀಸ್)