ಗಣಿಗಾರಿಕೆಯಿಂದ ಕೃಷ್ಣರಾಜಸಾಗರ ಅಣೆಕಟ್ಟೆಗೆ ಆಗುತ್ತಿರುವ ಅಪಾಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ವರ್ಷಗಳಿಂದ ಆತಂಕ ವ್ಯಕ್ತವಾಗುತ್ತಲೇ ಇತ್ತು. ಗಣಿಗಾರಿಕೆ ವಿರೋಧಿಸಿ ಸುದೀರ್ಘ ಹೋರಾಟಗಳು ಕೂಡ ನಡೆದಿವೆ. ಈ ಸಂಬಂಧ ಸೋಮವಾರ ಮಹತ್ವದ ಆದೇಶ ನೀಡಿರುವ ಹೈಕೋರ್ಟ್, ಕೃಷ್ಣರಾಜಸಾಗರ ಅಣೆಕಟ್ಟೆಯ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿದ್ದಲ್ಲದೆ, ಗಣಿಗಾರಿಕೆಯಿಂದ ಅಣೆಕಟ್ಟೆಯ ಮೇಲೆ ಆಗುತ್ತಿದೆ ಎನ್ನಲಾದ ಪರಿಣಾಮದ ಕುರಿತು ಆರು ತಿಂಗಳೊಳಗೆ ಅಧ್ಯಯನ ನಡೆಸುವಂತೆ ಆದೇಶಿಸಿದೆ. ಗಣಿಗಾರಿಕೆ ಪಿಡುಗಿಗೆ ರ್ತಾಕ ಅಂತ್ಯ ಕಾಣಿಸುವ ದಿಸೆಯಲ್ಲಿ ಇದು ಒಂದು ಮಹತ್ವದ ಹೆಜ್ಜೆ.
‘ಕೆಆರ್ಎಸ್ ಬರೀ ಅಣೆಕಟ್ಟೆಯಲ್ಲ, ಅದು ಈ ನಾಡಿನ ಪರಂಪರೆಯ ಪ್ರತೀಕ. ಅದನ್ನು ಉಳಿಸಿಕೊಳ್ಳುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ‘ಕಾವೇರಿ ನೀರಿಗಾಗಿ ಮೂರು ರಾಜ್ಯಗಳು ಹೋರಾಡುತ್ತಿವೆ. ಆದರೆ, ಅಣೆಕಟ್ಟು ಸಂರಕ್ಷಣೆಗೆ ಯಾರೂ ಪ್ರಯತ್ನಿಸುತ್ತಿಲ್ಲ. ಇದಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ಚಟುವಟಿಕೆ ನಡೆಸುವುದಕ್ಕೆ ಅವಕಾಶವಿಲ್ಲ’ ಎಂದು ಹೇಳಿರುವುದು ಗಮನಾರ್ಹ. ಅಣೆಕಟ್ಟು ಪರಿಸರದಲ್ಲಿ ಹಲವು ಬಾರಿ ದೊಡ್ಡ ಶಬ್ದ ಕೇಳಿ ಬಂದ ನಂತರ, ಸುರಕ್ಷತೆ ಬಗ್ಗೆ ಆತಂಕ ಮತ್ತಷ್ಟು ಹೆಚ್ಚಿತ್ತು. ಹಲವು ರಾಜಕಾರಣಿಗಳು ಸ್ಥಳಕ್ಕೆ ದೌಡಾಯಿಸಿ, ಸ್ಥಳೀಯರೊಂದಿಗೆ ಚರ್ಚೆ ನಡೆಸಿದ್ದರು. ಆದರೆ, ತದನಂತರವೂ ಕದ್ದುಮುಚ್ಚಿ ಗಣಿಗಾರಿಕೆ ನಡೆಯುತ್ತಲೇ ಇತ್ತು. ಇದು ರೈತರ ಪ್ರತಿಭಟನೆಗೂ ಕಾರಣವಾಗಿತ್ತು. ಅಣೆಕಟ್ಟೆಯ 25 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಅಣೆಕಟ್ಟು ಸುರಕ್ಷತಾ ಮರುಪರಿಶೀಲನಾ ಸಮಿತಿ 2021ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ ಶಿಫಾರಸು ಮಾಡಿತ್ತು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಮತ್ತು ಪುಣೆಯ ಸೆಂಟ್ರಲ್ ವಾಟರ್ ಮತ್ತು ಪವರ್ ರೀಸರ್ಚ್ ಸ್ಟೇಷನ್ಗಳು ನಿಯಮಾನುಸಾರ ಪರಿಶೀಲನೆ ನಡೆಸಿ ವರದಿ ಕೊಡುವವರೆಗೆ ಎಲ್ಲ ಚಟುವಟಿಕೆ ನಿಷೇಧಿಸುವಂತೆ ಅದು ತಿಳಿಸಿತ್ತು.
2018ರ ಸೆಪ್ಟೆಂಬರ್ 28ರಂದು ಬೇಬಿಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಕೇಳಿಬಂದ ಭಾರಿ ಶಬ್ದ ಹಾಗೂ ಭೂಕಂಪನದ ತೀವ್ರತೆ ಕೆಆರ್ಎಸ್ನಲ್ಲಿ ಅಳವಡಿಕೆಯಾಗಿದ್ದ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಿತ್ತು. ಜಿಲ್ಲಾಡಳಿತದ ಆದೇಶಕ್ಕೂ ಕ್ಯಾರೆ ಎನ್ನದೆ, ಈ ಬಗೆಯ ಕೃತ್ಯಗಳು ಮುಂದುವರಿದಾಗ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿತು. ಅಣೆಕಟ್ಟೆಗೆ ನಷ್ಟವಾದರೆ ಅದರಿಂದ ಉಂಟಾಗುವ ಹಾನಿ ಕಲ್ಪಿಸಿಕೊಳ್ಳಲು ಕೂಡ ಅಸಾಧ್ಯ. ಅಲ್ಲದೆ, ಕೆಆರ್ಎಸ್ನೊಂದಿಗೆ ಜನರು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು ಮುಂತಾದ ಪ್ರದೇಶಗಳಿಗೆ ನೀರು ಒದಗಿಸುವ ಮೂಲವೂ ಅದೇ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರ ಶ್ರಮ, ಕೌಶಲದಿಂದ ನಿರ್ವಣಗೊಂಡ ಈ ಅಣೆಕಟ್ಟೆಯ ಸುರಕ್ಷತೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ನ್ಯಾಯಾಲಯ ಈಗ ಅಧ್ಯಯನಕ್ಕೆ ಆರು ತಿಂಗಳ ಸಮಯ ನೀಡಿದೆ. ಈ ಅವಧಿಯಲ್ಲಿ ವೈಜ್ಞಾನಿಕ ಅಧ್ಯಯನದ ಪ್ರಕ್ರಿಯೆ ಪೂರ್ಣಗೊಂಡು, ಸಕಾಲದಲ್ಲಿ ವರದಿ ಸಲ್ಲಿಕೆಯಾಗಲಿ. ಮುಖ್ಯವಾಗಿ, ಹಲವು ವರ್ಷಗಳಿಂದ ಚರ್ಚೆಗೆ ಗ್ರಾಸವಾಗಿರುವ ಈ ವಿಷಯ ರ್ತಾಕ ಅಂತ್ಯವನ್ನು ಕಾಣುವಂತಾಗಲಿ.