ನ್ಯೂಸ್

ಸಂಪಾದಕೀಯ | ಕೆರೆಗಳನ್ನು ರಕ್ಷಿಸೋಣ

ಮೋಹನ್​ ಶೆಟ್ಟಿ

ಅಂತರ್ಜಲವನ್ನು ವೃದ್ಧಿಸುವಲ್ಲಿ ಹಾಗೂ ಆಯಾ ಪ್ರದೇಶದಲ್ಲಿ ಕೃಷಿ, ಕುಡಿಯುವ ನೀರಿನ ಪೂರೈಕೆಯಲ್ಲಿ ಕೆರೆಗಳಿಗೆ ಅವುಗಳದ್ದೇ ಆದ ಮಹತ್ವವಿದೆ. ಹಿಂದೆ ರಾಜರ ಕಾಲದಲ್ಲಿ ಕೆರೆಕಟ್ಟೆಗಳನ್ನು ಕಟ್ಟಿಸುವುದು ಆಡಳಿತದ ಒಂದು ಆದರ್ಶ ಮಾದರಿಯೇ ಆಗಿತ್ತು. ಆದರೆ ಕಾಲಕ್ರಮೇಣ, ಈ ಜಲಮೂಲಗಳ ಮೇಲೆ ಮಾನವನ ದುರಾಸೆಯ ದೃಷ್ಟಿ ಬಿದ್ದಿದ್ದ್ದಂದಾಗಿ ಎಷ್ಟೋ ಕೆರೆಗಳು ಅತಿಕ್ರಮಣಕ್ಕೀಡಾಗಿ, ಅಸ್ತಿತ್ವ ಕಳೆದುಕೊಳ್ಳುವಂತಾಯಿತು. ಇದರ ಪರಿಣಾಮ, ಅನತಿ ಕಾಲದಲ್ಲೇ ಗೋಚರವಾಯಿತು.

ರಾಜ್ಯದಲ್ಲಿನ 11,652 ಕೆರೆಗಳ 37,282 ಎಕರೆ ಪ್ರದೇಶ ಒತ್ತುವರಿಯಾಗಿರುವ ಸಂಗತಿ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಈ ಪೈಕಿ 6575 ಕೆರೆಗಳ 23,983 ಎಕರೆ ಪ್ರದೇಶವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದ್ದು, ಇನ್ನೂ 5077 ಕೆರೆಗಳ ಸುಮಾರು 13,298 ಎಕರೆ ಭೂ ಪ್ರದೇಶ ಒತ್ತುವರಿದಾರರ ಕಬ್ಜಾದಲ್ಲಿಯೇ ಇದೆ. ಇನ್ನೂ 10,754 ಕೆರೆಗಳ ಸಮೀಕ್ಷೆ ಬಾಕಿ ಇದೆ. ಹಾಸನ, ಶಿವಮೊಗ್ಗ, ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳು ಹೆಚ್ಚು ಒತ್ತುವರಿಯಾದ ಜಿಲ್ಲೆಗಳ ಪಟ್ಟಿಯಲ್ಲಿವೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಈ ಮಾಹಿತಿ ನೀಡಿದೆ. ಈ ನಡುವೆಯೂ, ಕೆರೆ ಒತ್ತುವರಿ ತೆರವು ಕಾರ್ಯ ನಡೆಯುತ್ತಿರುವುದು ತುಸು ಸಮಾಧಾನದ ಸಂಗತಿ.

ಬಾಕಿ ಉಳಿದಿರುವ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಸರ್ಕಾರವು ಜಿಲ್ಲಾ ಸಮಿತಿಗಳಿಗೆ ವಹಿಸಿದೆ. ರಾಜ್ಯದ ಕೆಲ ಪ್ರದೇಶಗಳಲ್ಲಿ ಜಲಮೂಲ ಪ್ರಮಾಣ ಏರಿಕೆಯಾಗಿರುವ ಸಂಗತಿಯನ್ನೂ ಪ್ರಾಧಿಕಾರ ಉಲ್ಲೇಖ ಮಾಡಿರುವುದು ಆತಂಕದ ನಡುವೆಯೂ ಆಶಾಭಾವನೆ ಉಂಟುಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಕೆರೆಗಳಲ್ಲಿ ಶೇ.70ರಷ್ಟು ನೀರು ಭರ್ತಿಯಾಗಿದೆ. ಕೆಲವೆಡೆ ನದಿಗಳಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗಿದೆ. ಬೆಂಗಳೂರು ನಗರ ಹಿಂದೆ ಕೆರೆಗಳಿಗಾಗಿ ಪ್ರಸಿದ್ಧಿಯಾಗಿತ್ತು. ನಗರದ ವಾತಾವರಣವನ್ನು ತಂಪಾಗಿರಿಸುವಲ್ಲಿ ಹಾಗೂ ಅಂತರ್ಜಲ ಮಟ್ಟ ಕಾಪಾಡಿಕೊಳ್ಳುವಲ್ಲಿ ಇದರಿಂದ ಅನುಕೂಲವಾಗಿತ್ತು. ಆದರೆ, ಕ್ರಮೇಣ ಈ ಜಲಮೂಲಗಳನ್ನೇ ಅತಿಕ್ರಮಿಸಿ ಮನೆ, ಅಪಾರ್ಟ್​ವೆುಂಟ್ ಕಟ್ಟುವ ಕೆಲಸ ಎಗ್ಗಿಲ್ಲದೆ ನಡೆಯಿತು.

ಬೆಂಗಳೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಇರುವ 837 ಕೆರೆಗಳ ಪೈಕಿ 730 ಕೆರೆಗಳನ್ನು ಒತ್ತುವರಿ ಮಾಡಲಾಗಿದೆ ಎಂದು ಪ್ರಾಧಿಕಾರದ ವರದಿ ಹೇಳಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಇದರ ಪರಿಣಾಮವನ್ನು ನಗರ ಈಗಾಗಲೇ ಅನುಭವಿಸುತ್ತಿದೆ. ಅಂತರ್ಜಲ ಮಟ್ಟ ಕುಸಿದಿದೆ. ಇದರೊಟ್ಟಿಗೆ, ಮಳೆಗಾಲದಲ್ಲಿ ನೀರು ಹರಿದು ಸೇರಲು ಸರಿಯಾದ ಜಾಗವಿಲ್ಲದೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೆರೆಗಳು ಅಕ್ಷರಶಃ ಪರಿಸರದ ಜೀವನಾಡಿಗಳು; ಸದಾ ಕಾಲ ಮಾನವರನ್ನು ಪೊರೆಯುವ ಜಲಚೇತನಗಳು. ಇಂಥ ಕೆರೆಗಳನ್ನು ರಕ್ಷಿಸಿಕೊಂಡು ಹೋಗದಿದ್ದರೆ ಭವಿಷ್ಯದ ಪೀಳಿಗೆಗಳು ಇನ್ನಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಕೆರೆಗಳ ಸಂರಕ್ಷಣೆ ಹಾಗೂ ಒತ್ತುವರಿ ತೆರವನ್ನು ಸರ್ಕಾರ ಆದ್ಯತೆ ಮೇಲೆ ಮಾಡಬೇಕಿದೆ. ಕೆರೆ ರಕ್ಷಣೆ ನಿಟ್ಟಿನಲ್ಲಿ ಸಮಾಜವೂ ತನ್ನ ಜವಾಬ್ದಾರಿ ನಿಭಾಯಿಸಬೇಕಿದೆ.