ಕರ್ನಾಟಕದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಶ್ರೇಣಿಯ 40,915 ದೇವಾಲಯಗಳನ್ನು ಇದೇ ವರ್ಷದ ಆಗಸ್ಟ್ 15ರಿಂದ ಪ್ಲಾಸ್ಟಿಕ್ವುುಕ್ತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಪ್ರಸ್ತುತ ಹಲವಾರು ದೇವಾಲಯಗಳು ಪ್ರಸಾದ ವಿತರಿಸಲು ಪ್ಲಾಸ್ಟಿಕ್ ಕವರ್ಗಳು, ತೀರ್ಥಗಳಿಗೆ ಪ್ಲಾಸ್ಟಿಕ್ ಬಾಟಲ್ಗಳು ಮತ್ತು ಭಕ್ತರಿಗೆ ಕುಂಕುಮ ನೀಡಲು ಪ್ಲಾಸ್ಟಿಕ್ ಸ್ಯಾಷೆಗಳನ್ನು ಬಳಸುತ್ತಿವೆ. ಇವುಗಳನ್ನು ನಿಷೇಧಿಸಲು ನಿರ್ಧರಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಹೇಳಿದ್ದಾರೆ.
ದೇವಾಲಯಗಳ ಪಾವಿತ್ರ್ಯ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಇದು ಪೂರಕ ಕ್ರಮ. ಮಂದಿರಗಳ ಕಾರ್ಯನಿರ್ವಹಣೆ ಪರಿಸರಸ್ನೇಹಿಯಾದರೆ ಅದರಿಂದ ಸಮಾಜಕ್ಕೂ ಸಕಾರಾತ್ಮಕ ಸಂದೇಶ ಸಿಕ್ಕಂತಾಗುತ್ತದೆ. ಜನಸಾಮಾನ್ಯರು ಕೂಡ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರೇರಣೆ ದೊರೆಯುತ್ತದೆ. ಪ್ಲಾಸ್ಟಿಕ್ನ ಬಳಕೆ ಪರಿಸರವನ್ನು ದೊಡ್ಡಮಟ್ಟದಲ್ಲಿ ಶೋಷಣೆ ಮಾಡುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರಸ್ನೇಹಿ ಉತ್ಪನ್ನಗಳ ಬಳಕೆ ಆರಂಭ ಮಾಡಲು ಇದು ಸಕಾಲ. ಇಂಥದ್ದೊಂದು ಸದುದ್ದೇಶ ದೇವಾಲಯಗಳಿಂದ ಆರಂಭವಾದರೆ, ಇತರೆಡೆಗಳಲ್ಲಿ ಜಾರಿಗೆ ತರಲು ಅನುಕೂಲವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಹಾಗೆಯೇ, ಮುಜರಾಯಿ ವ್ಯಾಪ್ತಿಗೆ ಬರುವ ಅನೇಕ ದೇವಾಲಯಗಳು ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಸರ್ಕಾರ ಇವುಗಳ ಪರಿಹಾರಕ್ಕೂ ಗಮನ ನೀಡಬೇಕು. ದೇವಾಲಯಗಳ ಆದಾಯ ಹೆಚ್ಚಳದ ಬಗ್ಗೆ ಮಾತ್ರ ಕ್ರಮ ಕೈಗೊಳ್ಳುವುದು ಸರಿಯಲ್ಲ. ಮುಖ್ಯವಾಗಿ ಮುಜರಾಯಿ ಇಲಾಖೆಯ ಬಿ ಮತ್ತು ಸಿ ದರ್ಜೆಯ ದೇವಾಲಯಗಳು ಮೂಲಸೌಕರ್ಯವಿಲ್ಲದೆ ಬಳಲುತ್ತಿವೆ. ನೈರ್ಮಲ್ಯವಿಲ್ಲದ್ದರಿಂದ ಭಕ್ತರು ಪರದಾಡುವಂತಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರ ಮತ್ತು ಇತರ ಸಿಬ್ಬಂದಿಯ ಸ್ಥಿತಿ ಶೋಚನೀಯವಾಗಿದೆ. ಅತ್ಯಲ್ಪ ಗೌರವಧನದಲ್ಲಿ ಅವರು ಜೀವನ ಸಾಗಿಸುವುದು ದುಸ್ತರವಾಗಿದ್ದು, ಕುಂದುಕೊರತೆಗಳಿಗೆ ಸ್ಪಂದನೆ ಸಿಗದೆ ನಿರಾಶರಾಗಿದ್ದಾರೆ. ದೇವಾಲಯಗಳು ಸುಸ್ಥಿತಿಯಲ್ಲಿ ಇರಬೇಕಾದರೆ ಮತ್ತು ಅಲ್ಲಿ ಪ್ರತಿನಿತ್ಯವೂ ಧಾರ್ವಿುಕ ಕಾರ್ಯಗಳು ಕ್ರಮಬದ್ಧವಾಗಿ ನಡೆಯಬೇಕಾದರೆ ಅರ್ಚಕರು ಮತ್ತು ಇತರ ಸಿಬ್ಬಂದಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯ.ರಾಜ್ಯದ ಹಲವು ಪುರಾತನ ದೇವಾಲಯಗಳು ಜೀಣೋದ್ಧಾರಕ್ಕೆ ಕಾದು ನಿಂತಿವೆ. ಪರಂಪರೆ ಮತ್ತು ಸಂಸ್ಕೃತಿಯ ಸಾಕ್ಷಿಯಾಗಿರುವ ಈ ಮಂದಿರಗಳು ಶ್ರದ್ಧೆ, ಭಕ್ತಿಯ ತಾಣಗಳು ಹೌದು. ಆದರೆ, ಇಂಥ ಪುರಾತನ ದೇವಾಲಯಗಳ ಜೀಣೋದ್ಧಾರ ಮತ್ತು ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ವಿಷಾದನೀಯ. ದೊಡ್ಡ ಮತ್ತು ಪ್ರಸಿದ್ಧ ದೇವಾಲಯಗಳಿಂದ ಬರೀ ಆದಾಯವನ್ನು ಪಡೆದು, ಪುರಾತನ ದೇವಾಲಯಗಳನ್ನು ಹೀನಾಯ ಸ್ಥಿತಿಯಲ್ಲೇ ಇಟ್ಟಿರುವುದು ಸರಿಯಲ್ಲ. ದೇವಾಲಯಗಳು ಅಧ್ಯಾತ್ಮ ಜಾಗೃತಿಯ, ಸಂಸ್ಕೃತಿ ಪ್ರಸರಣದ ಕೇಂದ್ರಗಳು. ಸಮಾಜವನ್ನು ನೈತಿಕ ಮಾರ್ಗದಲ್ಲಿ ಮುನ್ನಡೆಸುವ ಮಂದಿರಗಳ ಶಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ಹಾಗಾಗಿ, ಸರ್ಕಾರ ಈ ಆಯಾಮದಲ್ಲೂ ಸೂಕ್ತ ಯೋಜನೆ ರೂಪಿಸಿ, ಜೀಣೋದ್ಧಾರಕ್ಕೆ ಮುಂದಾದರೆ ಅದರಿಂದ ಧಾರ್ವಿುಕ ಪ್ರವಾಸೋದ್ಯಮಕ್ಕೂ ಬಲ ಬರುತ್ತದೆ ಮತ್ತು ಆಯಾ ಪ್ರದೇಶದ ದೇವಾಲಯ ಅಭಿವೃದ್ಧಿಗೊಂಡರೆ ಅಲ್ಲೊಂದು ಸಕಾರಾತ್ಮಕ ವಾತಾವರಣ ನೆಲೆಗೊಳ್ಳುತ್ತದೆ.