ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಬಿಟ್ಕಾಯಿನ್ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳೇ ಶಾಮೀಲಾಗಿ, ಸಿಐಡಿ ಎಸ್ಐಟಿಯಿಂದ ಬಂಧನಕ್ಕೊಳಗಾಗಿದ್ದಾರೆ. ದೇಶದಲ್ಲೇ ಕರ್ನಾಟಕ ಪೊಲೀಸರು ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿ. ಆದರೆ, ಬಿಟ್ಕಾಯಿನ್ ಹಗರಣದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳೇ ಆರೋಪಿಗಳಾಗಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಪೊಲೀಸರ ಮಾನ ಹರಾಜಾಗುವಂತೆ ಮಾಡಿದೆ.
2020ರಲ್ಲಿ ಬೆಂಗಳೂರಿನ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹ್ಯಾಕರ್ ಶ್ರೀಕಿ ಮತ್ತು ರಾಬಿನ್ ಖಂಡೇಲ್ವಾಲ್ರನ್ನು ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡು ಬಿಟ್ ಕಾಯಿನ್ಗಳನ್ನು ವರ್ಗಾವಣೆ ಮಾಡಿಸಿಕೊಂಡಿರುವುದು ಹಾಗೂ ಹಲವಾರು ಕ್ರಿಪ್ಟೋ ಕರೆನ್ಸಿ ವ್ಯಾಲೆಟ್ಗಳನ್ನು ಹ್ಯಾಕ್ ಮಾಡಿಸಿರುವ ಆರೋಪದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಲಕ್ಷಿ್ಮೕಕಾಂತಯ್ಯ, ಚಂದ್ರಧರ, ಡಿ.ಎಂ. ಪ್ರಶಾಂತ್ಬಾಬು, ಶ್ರೀಧರ್ ಕೆ. ಪೂಜಾರ್ (ಸದ್ಯ ಡಿವೈಎಸ್ಪಿ) ಮತ್ತು ಜಿಸಿಐಡಿ ಟೆಕ್ನಾಲಜೀಸ್ ಪ್ರೖೆ.ಲಿ. ಸಿಇಒ ಸಂತೋಷ್ಕುಮಾರ್ ವಿರುದ್ಧ ಸಿಐಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಶಾಂತ್ಬಾಬು ಹಾಗೂ ಸಂತೋಷ್ಕುಮಾರ್ರನ್ನು ಗುರುವಾರ ಎಸ್ಐಟಿ ಬಂಧಿಸಿದೆ. ಉಳಿದ ನಾಲ್ವರು ಪೊಲೀಸ್ ಅಧಿಕಾರಿಗಳ ಬಂಧನ ಶೀಘ್ರದಲ್ಲೇ ಆಗಲಿದೆ. ಹಗರಣ ನಡೆದಾಗ ಕರ್ತವ್ಯದಲ್ಲಿದ್ದ ಇನ್ನಷ್ಟು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಬಿಟ್ ಕಾಯಿನ್ ಉರುಳು ಸುತ್ತಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ಆರೋಪಿಗಳಾಗಿರುವ ಇನ್ಸ್ಪೆಕ್ಟರ್ಗಳು 2020ರಲ್ಲಿ ಬೇರೆಬೇರೆ ಪ್ರಕರಣಗಳ ತನಿಖಾಧಿಕಾರಿಗಳಾಗಿದ್ದರು. ಆಗ ಆರೋಪಿ ಶ್ರೀಕೃಷ್ಣ ಹಾಗೂ ಖಂಡೇಲ್ವಾಲ್ರನ್ನು ಬೇರೆಬೇರೆ ಸಂದರ್ಭದಲ್ಲಿ ಅಕ್ರಮ ಬಂಧನದಲ್ಲಿ ಇರಿಸಿಕೊಂಡಿದ್ದರು. 2020ರ ಡಿ.30, 31 ಮತ್ತು 2021ರ ಜ. 6ರಂದು ಖಂಡೇಲ್ವಾಲ್ನ ಕ್ರಿಪ್ಟೋ ವ್ಯಾಲೆಟ್ ಖಾತೆಗಳನ್ನು ಅನಧಿಕೃತವಾಗಿ ಆಕ್ಸೆಸ್ ಮಾಡಿದ್ದ ಸಂತೋಷ್ಕುಮಾರ್, 1,83,624 ಮೌಲ್ಯದ ಬಿಟ್ ಕಾಯಿನ್ಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಇದಕ್ಕೆ ಲಕ್ಷಿ್ಮೕಕಾಂತಯ್ಯ ಮತ್ತು ಚಂದ್ರಧರ್ ಸಹಕಾರ ನೀಡಿದ್ದರು. ಇನ್ಸ್ಪೆಕ್ಟರ್ ಪ್ರಶಾಂತ್ಬಾಬು ತಾವೇ ಖುದ್ದು 60 ಸಾವಿರ ರೂ.ಗೆ ಹೊಸ ಲ್ಯಾಪ್ಟಾಪ್ ಖರೀದಿಸಿ ತಂದು ಶ್ರೀಕಿಗೆ ಕೊಟ್ಟು ಕೆಲವು ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿಸಿದ್ದರು. ಸಾಕ್ಷ್ಯ ಸಿಗಬಾರದೆಂದು ಬ್ಯಾಕ್ ಹಿಸ್ಟರಿ ಡಿಲೀಟ್ ಮಾಡಿರುವುದು ಎಸ್ಐಟಿ ತಾಂತ್ರಿಕ ವಿಶ್ಲೇಷಣೆಯಲ್ಲಿ ಸಾಬೀತಾಗಿದೆ. ಆರೋಪಿತ ಅಧಿಕಾರಿಗಳು ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಕ್ರಿಪ್ಟೋ ಕರೆನ್ಸಿ ಹಗರಣವನ್ನು ಭೇದಿಸಿ ತಪ್ಪಿತಸ್ಥರನ್ನು ಜೈಲಿಗಟ್ಟಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ತನಿಖಾಧಿಕಾರಿಗಳೇ ತಪ್ಪು ಮಾಡಿ ಸಿಕ್ಕಿಬಿದ್ದಿರುವುದು ಇಡೀ ವ್ಯವಸ್ಥೆಯನ್ನೇ ಅಣಕಿಸಿದಂತಿದೆ. ಪ್ರಕರಣದ ತನಿಖೆಗೆ ದೊರೆಯಬಹುದಾಗಿದ್ದ ಅಮೂಲ್ಯವಾದ ಡಿಜಿಟಲ್ ಸಾಕ್ಷ್ಯಾಧಾರವನ್ನು ಸಂಗ್ರಹಿಸುವ ಬದಲಿಗೆ ತನಿಖಾಧಿಕಾರಿಗಳೇ ಹ್ಯಾಕಿಂಗ್ ಮಾಡಿಸಿ ಬಿಟ್ಕಾಯಿನ್ ವರ್ಗಾವಣೆ ಮಾಡಿಸಿಕೊಳ್ಳುವುದರ ಮೂಲಕ ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತೆ ಮಾಡಿದ್ದಾರೆ. ಇವರ ಈ ಕೃತ್ಯದಿಂದಾಗಿ ಪೊಲೀಸ್ ವ್ಯವಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯನ್ನೇ ಜನರು ಕಳೆದುಕೊಳ್ಳುವಂತಾಗುತ್ತದೆ. ಎಲ್ಲ ಪೊಲೀಸರು ಕೆಟ್ಟವರಲ್ಲ. ಆದರೆ, ಕೆಲವರು ಮಾಡುವ ತಪ್ಪಿನಿಂದ ಇಡೀ ಪೊಲೀಸ್ ಸಮುದಾಯಕ್ಕೇ ಕೆಟ್ಟ ಹೆಸರು ಬರತ್ತದೆ. ಇಂತಹ ಪ್ರಕರಣಗಳು ಬೆಳಕಿಗೆ ಬಂದ ನಂತರವಾದರೂ ತಪ್ಪು ಹೆಜ್ಜೆ ಇಡಲು ಆಲೋಚಿಸುತ್ತಿರುವವರು ತಿದ್ದಿಕೊಂಡು ದಕ್ಷ-ಪ್ರಾಮಾಣಿಕ ಕರ್ತವ್ಯಕ್ಕೆ ಒತ್ತು ಕೊಡಬೇಕು. ಈ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಪೊಲೀಸ್ ಅಧಿಕಾರಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು.