ಮಂದಿರಗಳು ಶ್ರದ್ಧೆಯನ್ನು ಅರಳಿಸುವ, ನೈತಿಕತೆಯನ್ನು ಬಿತ್ತುವ ಕೇಂದ್ರಗಳು. ದೇವಸ್ಥಾನಗಳ ಪಾವಿತ್ರ್ಯ ಕಾಪಾಡುವ ಜತೆಗೆ, ಅಲ್ಲಿನ ಸಾತ್ವಿಕ ವಾತಾವರಣವನ್ನು ಹೆಚ್ಚಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ, ಆಧುನಿಕತೆಯ ಹೆಸರಿನಲ್ಲಿ ದೇವಸ್ಥಾನಗಳಿಗೂ ಹೇಗೇಗೋ ಹೋಗುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದು ಅಶಿಸ್ತಿಗೆ ದಾರಿಯಾಗುತ್ತಿದೆ. ಇದನ್ನು ಗಮನಿಸಿಯೇ, ದೇಶದ ಅನೇಕ ದೇವಾಲಯ, ಗುರುದ್ವಾರ, ಚರ್ಚ್ ಹಾಗೂ ಇತರ ಪ್ರಾರ್ಥನಾ ಸ್ಥಳಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಿದೆ. ಉಜ್ಜೈನಿಯ ಮಹಾಕಾಲೇಶ್ವರ, ವಾರಾಣಸಿ ಕಾಶಿ ವಿಶ್ವೇಶ್ವರ, ತಿರುಪತಿಯ ಶ್ರೀವೆಂಕಟೇಶ್ವರ, ಕೇರಳದ ಶ್ರೀಪದ್ಮನಾಭಸ್ವಾಮಿ ದೇಗುಲ ಸೇರಿ ಹಲವೆಡೆ ಸಾತ್ವಿಕ ವಸ್ತ್ರಸಂಹಿತೆ ಜಾರಿಯಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ 500ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಕಾರ ವಸ್ತ್ರಸಂಹಿತೆ ಜಾರಿಗೊಳಿಸುವ ನಿರ್ಣಯವನ್ನು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ವಿುಕ ಸಂಸ್ಥೆಗಳ ಮಹಾಸಂಘ ಕೈಗೊಂಡಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಸಂಸ್ಕಾರವರ್ಧನೆ, ಶಿಸ್ತುಪಾಲನೆ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆ.
ಈ ಯೋಜನೆಯ ಭಾಗವಾಗಿ, ಮೊದಲ ಹಂತದಲ್ಲಿ ಬೆಂಗಳೂರಿನ 50 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಲಿದೆ. ಅಲ್ಲದೆ, ಧಾರ್ವಿುಕ ದತ್ತಿ ಇಲಾಖೆ ಅಧೀನದ ದೇಗುಲಗಳಲ್ಲೂ ವಸ್ತ್ರಸಂಹಿತೆ ಜಾರಿ ಹಾಗೂ ಧರ್ಮಶಿಕ್ಷಣ ಫಲಕಗಳನ್ನು ಅಳವಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ವಿುಕ ಸಂಸ್ಥೆಗಳ ಮಹಾಸಂಘ ನಿರ್ಧರಿಸಿದೆ. ಈ ಹಿಂದೆ ಧಾರ್ವಿುಕ ದತ್ತಿ ಇಲಾಖೆಯ ರಾಜ್ಯ ಧಾರ್ವಿುಕ ಪರಿಷತ್ ಸಹ ರಾಜ್ಯದ 211 ‘ಎ’ ಗ್ರೇಡ್ ದೇವಸ್ಥಾನಗಳಲ್ಲಿ ಭಕ್ತರಿಗೆ ವಸ್ತ್ರಸಂಹಿತೆಯನ್ನು ಅಳವಡಿಸುವ ಕುರಿತು ಚಿಂತನೆ ನಡೆಸಿತ್ತು. ಇದಕ್ಕೆ ಹೆಚ್ಚಿನ ಭಕ್ತವೃಂದದಿಂದ ಬೆಂಬಲವೂ ವ್ಯಕ್ತವಾಗಿತ್ತು. ಆದರೆ, ಮುಂದಿನ ಹಂತದಲ್ಲಿ ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಲಿಲ್ಲ. ಮಹಿಳೆಯರು ಚೂಡಿದಾರ, ಲಂಗ-ದಾವಣಿ, ಸಲ್ವಾರ್-ಕುರ್ತಾ, ಸೀರೆ ಇತ್ಯಾದಿ ಪಾರಂಪರಿಕ ಸಾತ್ವಿಕ ವೇಷಭೂಷಣ, ಪುರುಷರು ಕುರ್ತಾ, ಧೋತಿ, ಸಾಮಾನ್ಯ ಶರ್ಟ್- ಪ್ಯಾಂಟ್, ಲುಂಗಿ ಅಥವಾ ಪೈಜಾಮ ಧರಿಸಿ ದೇವಸ್ಥಾನಕ್ಕೆ ಬರಬೇಕು ಎಂದು ಹಲವು ಧಾರ್ವಿುಕ ನೇತಾರರು ಈ ಹಿಂದೆಯೇ ಹೇಳಿದ್ದಾರೆ.
ಸಂಸ್ಕೃತಿರಕ್ಷಣೆ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ದೇವಸ್ಥಾನಗಳಲ್ಲೇ ಸಂಸ್ಕೃತಿಯನ್ನು ಉಲ್ಲಂಘಿಸುವಂತಾಗಬಾರದು. ಅಲ್ಲದೆ, ಉತ್ತಮ ನಡವಳಿಕೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾದರೆ ಈಗಿನವರು ಪ್ರಜ್ಞಾವಂತಿಕೆಯಿಂದ ಕೆಲ ರೀತಿನೀತಿಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಸಾತ್ವಿಕ ಉಡುಪಿನಲ್ಲಿ ದೇವಸ್ಥಾನಕ್ಕೆ ಹೋದರೆ ಅದರಿಂದ ಸಿಗುವ ಸಾರ್ಥಕತೆಯನ್ನು ಆಸ್ತಿಕರು ಅನುಭವಿಸಬೇಕು. ಇನ್ನಾದರೂ, ಸಕಾರಾತ್ಮಕ ಬದಲಾವಣೆಯತ್ತ ಹೆಜ್ಜೆ ಇರಿಸಬೇಕು.