ನ್ಯೂಸ್

ಶಂಖ- ಚಕ್ರ- ಗದಾಧಾರಿಯು ಕಾಪಾಡಲಿ

ಮೋಹನ್​ ಶೆಟ್ಟಿ
ವಿಷ್ಣುಸಹಸ್ರನಾಮವನ್ನು ಪಾರಾಯಣ ಮಾಡುವ ಸಂಪ್ರದಾಯದಲ್ಲಿ ಶ್ಲೋಕವೊಂದನ್ನು ಫಲಶ್ರುತಿಯ ಭಾಗದಲ್ಲಿ ಹೇಳುವ ರೂಢಿಯಿದೆ. ಅದೆಂದರೆ ‘ವನಮಾಲೀ ಗದೀ ಶಾšಙ್ಗೀ ಶಂಖೀ ಚಕ್ರೀ ಚ ನಂದಕೀ | ಶ್ರೀಮಾನ್ ನಾರಾಯಣೋ ವಿಷ್ಣುಃ ವಾಸುದೇವೋಭಿರಕ್ಷತು ||’ ಎಂಬುದಾಗಿ. ಏನಿದರರ್ಥ?

ಶಂಖ- ಚಕ್ರ- ವಿಷ್ಣು- ನಾರಾಯಣ - ಇವೆಲ್ಲ ಪ್ರಸಿದ್ಧವೇ. ವಾಸುದೇವನು ಕಾಪಾಡಲಿ ನಮ್ಮನ್ನು ಎಂದಿಲ್ಲಿ ಪ್ರಾರ್ಥಿಸಿದೆ. ಆದರೆ ಶಂಖೀ, ಚಕ್ರೀ - ಇತ್ಯಾದಿಗಳಲ್ಲಿ ಬಂದಿರುವ ಈ ‘ಈ’ಕಾರವೇನು? ಅದೇನೋ ಯಾರನ್ನಾದರೂ ಸಲಿಗೆಯಿಂದ ಮಾತನಾಡಿಸಲು ಸೇರಿಸಿಕೊಂಡು ಕರೆಯುವ ಈಕಾರವಲ್ಲ: ಹೆಸರು ಸೋಮನಾಥ ಎಂದಿದ್ದರೆ ‘ಲೋ ಸೋಮೀ’ - ಎಂದು ಪ್ರೀತಿಗೆ ಕರೆಯುವ ಬಗೆಯಲ್ಲ.

ಸಂಸ್ಕೃತದಲ್ಲಿ ಇದನ್ನು ಮತ್ವರ್ಥಕ ಎನ್ನುತ್ತಾರೆ. ಏನು ಹಾಗೆಂದರೆ? ಹೊಂದಿರುವಿಕೆ ಎಂದದರರ್ಥ. ಕನ್ನಡದಲ್ಲಿ ಧಣೀ ಎನ್ನುವರಲ್ಲವೇ? ಸಾಹುಕಾರನಾದ ಒಡೆಯನನ್ನು ಕುರಿತು ಹಿಂದೆ ಈ ಪದವನ್ನು ಬಳಸುತ್ತಿದ್ದರು. ಈಗಲೂ ಅದೇ ಅರ್ಥ ಇಂಗ್ಲೀಷಿನ ಪದವನ್ನು ಹಾಕುತ್ತಾರೆ, ಅಷ್ಟೆ: ಏನ್ ಬಾಸ್? ಎನ್ನುವುದಿಲ್ಲವೇ? ಧಣೀ ಎಂಬುದರ ಮೂಲ ‘ಧನೀ’ ಎಂಬುದು. ಧನವನ್ನುಳ್ಳವನು ‘ಧನೀ’ ನಕಾರವನ್ನು ಣಕಾರಮಾಡಿ ಕೊಂಡಿದೆ. ಹಾಗೆಯೇ ಬುದ್ದೀ ಎಂಬುದೂ. ಬುದ್ಧಿಯುಳ್ಳವರು ಎಂಬ ಲೆಕ್ಕದ ಮೇಲೆ ಬುದ್ದೀ ಎಂದು ಕರೆಯುವುದು. ಅದು ಹೊಗಳಿಕೆಯ ಪದವಲ್ಲ; ಎಚ್ಚರಿಸುವ ಪದ!

ಹೇಗೆ ಧನವನ್ನು ಹೊಂದಿರುವವನು ಧನಿಯೋ, ಹಾಗೆಯೇ ಶಂಖವನ್ನು ಹೊಂದಿರುವವನು ಶಂಖೀ, ಚಕ್ರವುಳ್ಳ ವನು ಚಕ್ರೀ. ಶಂಖ-ಚಕ್ರಗಳನ್ನು ಹಿಡಿದಿ ರುವ ಯಾವನನ್ನು ಬೇಕಾದರೂ ಶಂಖೀ-ಚಕ್ರೀ ಎಂದು ಕರೆಯಬಹುದು; ಆದರೆ ವಿಷ್ಣುವೇ ಅವನ್ನು ಧರಿಸಿರುವ ಪ್ರಸಿದ್ಧಿಯುಂಟಲ್ಲವೇ? ವನಮಾಲೆಯೆಂದರೆ ಯಾವುದೋ ಕಾಡಿನ ಮಾಲೆಯೆಂದಲ್ಲ. ಅದಕ್ಕೆ ವಿಶಿಷ್ಟವಾದ ಅರ್ಥವಿದೆ. ಕಾಡಿನಲ್ಲಿ ಹುಟ್ಟಿದ ಹೂಗಳಿಂದ ಮಾಡಲಾಗಿರುವ ಮಾಲೆಯೇ ಅದಾಗಿದ್ದರೂ, ಶ್ರೀಕೃಷ್ಣನು ಧರಿಸುವ ಮಾಲಾವಿಶೇಷವದು. ಅದು ಆಜಾನುಲಂಬಿ, ಎಂದರೆ ಮಂಡಿಯವರೆಗೂ ಬರುವಷ್ಟು ಉದ್ದವಾದುದು. ಜಾನುವೆಂದರೆ ಮಂಡಿ. ಅಷ್ಟೇ ಅಲ್ಲ. ಎಲ್ಲ ಋತುಗಳ ಹೂಗಳನ್ನೂ ಅದರಲ್ಲಿ ಪೋಣಿಸಿದೆ. ಮತ್ತು ಆ ಕಾರಣಕ್ಕೇ ಅದು ಉಜ್ಜ್ವಲವಾಗಿದೆ. ಮತ್ತು ಹೂಮಾಲೆಯನ್ನು ಕಟ್ಟಿದರೆ ಅದರ ಮಧ್ಯಸ್ಥಾನದಲ್ಲಿ ಒಂದು ದಪ್ಪನೆಯ ಹೂವನ್ನೋ ಕಂದವನ್ನೋ ಕಟ್ಟುವುದುಂಟಲ್ಲವೇ? ಹಾಗೆ ಪದಕದಂತೆ ಮಧ್ಯಭಾಗದಲ್ಲಿ ದಪ್ಪನೆಯ ಕದಂಬ-ಪುಷ್ಪವನ್ನು ಸೇರಿಸಿರುವಂತಹುದು ವನಮಾಲೆ.

ಕೃಷ್ಣನು ಅಲಂಕಾರಪ್ರಿಯನೇನೋ ಹೌದು. ಎಂದೇ ವನಮಾಲೆಯನ್ನು ಧರಿಸಿರುವುದು ಒಪ್ಪತಕ್ಕದ್ದೇ. ಆದರೆ ಈ ಗದೆ-ಬಿಲ್ಲು-ಶಂಖ-ಚಕ್ರಗಳೇನು? ಶಂಖವನ್ನುಳಿದು ಮಿಕ್ಕ ಮೂರೂ ಆತನ ಪ್ರಸಿದ್ಧ ಆಯುಧಗಳೇ. ಈಚೆಗೊಬ್ಬರು ಆಕ್ಷೇಪಿಸಿದರು: ‘ನಮ್ಮ ದೇವರುಗಳ ಕೈಯಲ್ಲಿ ಬಿಲ್ಲು-ಬಾಣಗಳುಂಟು. ರಾವಣ ಸಂಹಾರವನ್ನು ರಾಮನು ಬಿಲ್ಲು - ಬಾಣಗಳಿಂದಲೇ ಮಾಡಿದನಲ್ಲವೇ? ಅಂದಿಗೆ ಅದು ಸರಿ. ಆದರೆ ಇಂದಿಗೂ ಅವೇ ಬೇಕೆ? ಇಂದಿಗೆ ದೇವತೆಗಳೂ ಮಾಡರ್ನ್ ಆಗಬೇಡವೇ? ಅದಕ್ಕೇ ಅವರ ಕೈಗಳಲ್ಲಿ ಗನ್ನು-ಗ್ರೆನೇಡುಗಳನ್ನು ಜೋಡಿಸಿದರೆ ಇನ್ನೂ ಚೆನ್ನಲ್ಲವೇ?’ ಎಂದು.

ಆದರೆ ಶ್ರೀರಂಗಮಹಾಗುರುಗಳು ಇಲ್ಲಿಯ ಮರ್ಮವನ್ನು ತಿಳಿಸಿದ್ದರು. ‘ಭಗವಂತನ ಕೈಯಲ್ಲಿರುವ ಆಯುಧಗಳು ಭೌತಿಕ ಪದಾರ್ಥಗಳಲ್ಲ. ವಿಷ್ಣುವಿನ ಕೈಯಲ್ಲಿರುವ ಶಂಖ-ಚಕ್ರ ಮೊದಲಾದವು ತತ್ತಾ್ವತ್ಮಕವಾದಂತಹವು’ - ಎಂದು. ಇದು ಏನೋ ಕಲ್ಪಿತವಾದ ಉತ್ತರವಲ್ಲ, ಇದಕ್ಕೆ ಶಾಸ್ತ್ರಾಧಾರವೂ ಉಂಟು. ವಿಷ್ಣುವಿನ ಕೈಯಲ್ಲಿರುವ ಗದೆಯು ಬುದ್ಧಿತತ್ತ್ವವನ್ನು ಪ್ರತೀಕಿಸುತ್ತದೆ. ಹಾಗೆಯೇ ಶಂಖವೂ ಶಾšರ್Yವೂ ಎರಡು ಬಗೆಯ ಅಹಂಕಾರಗಳನ್ನು ಸೂಚಿಸುತ್ತವೆ. ಚಕ್ರವು ಮನಸ್​ತತ್ತ್ವದ ಪ್ರತೀಕ. ಆತನ ನಂದಕವು ಜ್ಞಾನಕ್ಕೆ ಸೂಚಕವಾದುದು.

ಭಗವಂತನಿಗೂ ಅಹಂಕಾರವುಂಟೇ? ಅಹಂಕಾರವು ಕೆಟ್ಟದ್ದಲ್ಲವೆ? - ಎಂದು ಕೇಳಬಹುದು. ಗರ್ವದ ಅಹಂಕಾರವು ದುಷ್ಟವಾದದ್ದು; ಆದರೆ ಯಾವುದೇ ಕಾರ್ಯದಲ್ಲಿ ತೊಡಗಲು ಅವಶ್ಯವೇ ಆಗುವ ಅಹಂಕಾರವೆಂಬುದೊಂದುಂಟು. ಅಲ್ಲದೆ, ಇಲ್ಲಿ ಹೇಳಿರುವ ಎರಡು ಬಗೆಯ ಅಹಂಕಾರವನ್ನು ತಿಳಿಯಲು ಸಾಂಖ್ಯಶಾಸ್ತ್ರದ ಹೆಚ್ಚಾದ ಪರಿಚಯವೇಬೇಕು. ಇನ್ನು ಇಲ್ಲಿ ಹೇಳಿರುವ ಮನಸ್ಸು- ಬುದ್ಧಿ- ಅಹಂಕಾರ ಹಾಗೂ ಜ್ಞಾನ - ಇವುಗಳೆಲ್ಲವೂ ಸಾಂಖ್ಯಶಾಸ್ತ್ರದಲ್ಲಿ ವಿವರಿಸಲಾಗಿರುವ ತತ್ತ್ವಗಳೇ. ಮೇಲ್ಮುಖವಾದ ಶಂಖ- ಚಕ್ರಗಳು ಸಾತ್ವಿಕ ಪ್ರವೃತ್ತಿಯನ್ನು ಸೂಚಿಸುವುವು - ಎಂದೂ ಶ್ರೀರಂಗಮಹಾಗುರುಗಳು ಹೇಳಿದ್ದರು. ಹೀಗೆ ಭಗವನ್ಮೂರ್ತಿಯನ್ನು ಭೂಷಿಸುವ ಆಯುಧಗಳು ತಾತ್ವಿಕವಾದಂತಹವು ಎಂಬುದನ್ನು ತಿಳಿಯಬೇಕು.