ಕೇಂದ್ರ ಸರ್ಕಾರ ಈ ಮೊದಲೇ ಘೋಷಿಸಿದಂತೆ 10 ಬ್ಯಾಂಕುಗಳ ವಿಲೀನ ಏಪ್ರಿಲ್ 1ರಿಂದ ಜಾರಿಯಾಗಿದೆ. ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್(ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ(ಯುಬಿಐ) ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಜತೆ ವಿಲೀನಗೊಂಡಿವೆ. ಪರಿಣಾಮ, ಎಸ್ಬಿಐ ನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇಶದ ಎರಡನೇ ದೊಡ್ಡ ಸಾರ್ವಜನಿಕ ಬ್ಯಾಂಕ್ ಎನಿಸಿಕೊಂಡಿದೆ. ಅಲ್ಲದೆ, ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ ಜತೆ ವಿಲೀನವಾಗಿದ್ದರೆ, ಇಂಡಿಯನ್ ಬ್ಯಾಂಕ್ ಅಲಹಾಬಾದ್ ಬ್ಯಾಂಕ್ ಜತೆ ವಿಲೀನವಾಗಿದೆ. ಯೂನಿಯನ್ ಬ್ಯಾಂಕ್ ಜತೆ ಕಾಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ವಿಲೀನವಾಗಿವೆ. ಈ ಮಹಾವಿಲೀನದ ಪರಿಣಾಮ 2017ರಲ್ಲಿ 27ರಷ್ಟಿದ್ದ ಸಾರ್ವಜನಿಕ ಬ್ಯಾಂಕುಗಳ ಸಂಖ್ಯೆ 12ಕ್ಕೆ ಇಳಿದಿದೆ.
ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕಿಂಗ್ ರಂಗದ ಆರೋಗ್ಯ ಕುಸಿದಿರುವುದು, ವೆಚ್ಚ ಅನಿಯಂತ್ರಿತವಾಗಿರುವುದು ಗೊತ್ತಿರುವಂಥದ್ದೇ. ಇದಕ್ಕೆ ಕಡಿವಾಣ ಹಾಕಿ ಗುಣಮಟ್ಟ ಹೆಚ್ಚಿಸುವ ಉದ್ದೇಶ ಸರ್ಕಾರದ್ದು. ಹಾಗಾಗಿಯೇ, ಸರ್ಕಾರ ಮೊದಲ ಪ್ರಯತ್ನದಲ್ಲಿ ಎಸ್ಬಿಐ ಮತ್ತು ಅದರ ಸಹವರ್ತಿ ಬ್ಯಾಂಕುಗಳನ್ನು ವಿಲೀನ ಮಾಡಿತ್ತು. ಆ ಬಳಿಕ ಬ್ಯಾಂಕ್ ಆಫ್ ಬರೋಡಾ, ದೇನಾ ಮತ್ತು ವಿಜಯಾ ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿತ್ತು. ಪ್ರಸಕ್ತ 10 ಬ್ಯಾಂಕುಗಳು ವಿಲೀನಗೊಂಡಿದ್ದು, ವಿಲೀನಗೊಂಡ ಬ್ಯಾಂಕುಗಳ ಸಿಬ್ಬಂದಿ ಭಾವನಾತ್ಮಕ ಕಾರಣದಿಂದ ಸ್ವಲ್ಪ ಬೇಜಾರಿನಲ್ಲೂ ಇದ್ದಾರೆ.
ಹೆಚ್ಚು ಬ್ಯಾಂಕುಗಳಿದ್ದರೆ ನಿರ್ವಹಣೆಯೂ ಕಷ್ಟ. ಅನಾರೋಗ್ಯಕರ ಸ್ಪರ್ಧೆಯಿಂದ ಬ್ಯಾಂಕುಗಳ ಶಾಖೆಗಳು, ಅವುಗಳ ಖರ್ಚು ಹೆಚ್ಚುತ್ತಿವೆಯೇ ಹೊರತು ಗುಣಮಟ್ಟವಲ್ಲ. ಹೀಗಾಗಿ ವಿಲೀನ ಪ್ರಕ್ರಿಯೆ ಬ್ಯಾಂಕಿಂಗ್ ವೆಚ್ಚಕ್ಕೆ ನಿಯಂತ್ರಣ ಹೇರಲಿದ್ದು, ಜಾಗತಿಕ ಮಟ್ಟದ ಬೃಹತ್ ಬ್ಯಾಂಕುಗಳ ರಚನೆಗೆ ಅನುವಾಗಲಿದೆ.
ಜಾಗತಿಕ ಮಟ್ಟದ ಬ್ಯಾಂಕುಗಳಿಗೆ ಭಾರತೀಯ ಬ್ಯಾಂಕುಗಳು ಸ್ಪರ್ಧೆ ಒಡ್ಡುತ್ತಿಲ್ಲವೆಂಬುದು ವಾಸ್ತವವೇ. ವಿದೇಶಿ ಬ್ಯಾಂಕುಗಳಿಗೆ ಹೋಲಿಸಿದರೆ ನಮ್ಮ ಬ್ಯಾಂಕುಗಳ ಶೇರು ಬಂಡವಾಳ ತುಂಬ ಕಡಿಮೆ. ಬ್ಯಾಂಕುಗಳನ್ನು ವಿಲೀನ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಮತ್ತು ಶೇರು ಬಂಡವಾಳ ಸಾಮರ್ಥ್ಯ ಇರುವ ಬ್ಯಾಂಕುಗಳ ಸ್ಥಾಪನೆಗೆ ಕೇಂದ್ರ ಮುಂದಾಗಿರುವುದು ಇದೇ ಕಾರಣಕ್ಕೆ. ಆರ್ಥಿಕ-ಸಾಮಾಜಿಕ ಸಮೀಕರಣಗಳು ಬದಲಾಗಿರುವುದಲ್ಲದೆ, ಹಲವು ಬ್ಯಾಂಕುಗಳು ಆರ್ಥಿಕ ಸಂಕಷ್ಟದಲ್ಲಿರುವುದು, ಅವುಗಳ ಅನುತ್ಪಾದಕ ಆಸ್ತಿ(ಎನ್ಪಿಎ) ಹೆಚ್ಚುತ್ತಿರುವುದು ಕಹಿಸತ್ಯ. ಆದ್ದರಿಂದ, ಬ್ಯಾಂಕುಗಳನ್ನು ಸದೃಢಗೊಳಿಸುವುದು, ಜನಸಾಮಾನ್ಯ ಗ್ರಾಹಕರ ವಿಶ್ವಾಸವನ್ನು ವೃದ್ಧಿಸುವುದು, ಶೇರು ಬಂಡವಾಳ ಹೆಚ್ಚಿಸುವುದು, ಸೇವೆ ಗುಣಮಟ್ಟವನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸುವುದು, ಆರೋಗ್ಯಕರ ಸ್ಪರ್ಧೆಗೆ ಒತ್ತು ನೀಡುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿತ್ತು. ಇದಕ್ಕೆ ಬ್ಯಾಂಕುಗಳ ವಿಲೀನವೇ ದಿವ್ಯೌಷಧ ಎಂಬುದು ವಿತ್ತ ಮಂತ್ರಿಗಳ ನಂಬಿಕೆ. ಅದರಂತೆ, ಹಲವು ಹಂತಗಳಲ್ಲಿ ವಿಲೀನ ಪ್ರಕ್ರಿಯೆ ನಡೆದಿದೆ. ಈ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಿಬ್ಬಂದಿಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಈ ಸುಧಾರಣೆಯ ಹೆಜ್ಜೆಗಳು ಬ್ಯಾಂಕಿಂಗ್ ರಂಗವನ್ನು ಬೇರುಮಟ್ಟದಿಂದ ಬಲಗೊಳಿಸಬೇಕು, ವಿತ್ತೀಯ ಸುಧಾರಣೆಗೆ, ಜನರ ವಿಶ್ವಾಸಕ್ಕೆ ಪೂರಕವಾಗಿ ಇರಬೇಕು ಎಂಬುದೇ ಆಶಯ.
(ಓದುಗರ ಗಮನಕ್ಕೆ: ಅನಿವಾರ್ಯ ಕಾರಣದಿಂದ ತೇಜಸ್ವಿನಿ ಅನಂತಕುಮಾರ್ ಅವರ ‘ಹಲೋ ಒಂದ್ನಿಮಿಷ’, ದೀಪಾ ಹಿರೇಗುತ್ತಿ ಅವರ ‘ನಾನು ನೀವು ಮತ್ತು...’ ಅಂಕಣಗಳು ಪ್ರಕಟಗೊಂಡಿಲ್ಲ)