ಕೃಷಿ ಸಂಸ್ಕೃತಿಯ ನಾಡು ಮಂಡ್ಯದಲ್ಲಿ ಇಂದು (ಶುಕ್ರವಾರ) 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಜಾನಪದ ಸಾಹಿತಿ, ಹಿರಿಯ ವಿದ್ವಾಂಸ ಹಾಗೂ ಸಂಘಟಕ ಗೊ.ರು. ಚನ್ನಬಸಪ್ಪ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ನುಡಿತೇರನ್ನು ಎಳೆಯಲಿದ್ದಾರೆ. ಕನ್ನಡದ ಕುರಿತಾದ ಆತಂಕಗಳು, ಸವಾಲುಗಳು ಹಾಗೆಯೇ ಭರವಸೆಗಳ ಬಗ್ಗೆಯೂ ಮುಕ್ತಮನಸ್ಸಿನಿಂದ ಅವಲೋಕನ ಅಗತ್ಯ. ಈ ಕುರಿತಂತೆ 'ವಿಜಯವಾಣಿ'ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಗೊರುಚ ಹಂಚಿಕೊಂಡಿರುವ ಅನುಭವದ ಮಾತುಗಳು ಇಲ್ಲಿವೆ.
-ಭಾಷೆ ಒಂದು ಭಾವನಾತ್ಮಕ ವಿಚಾರ. ಯಾವುದೇ ಭಾಷೆಯ ಜನರಿರಲಿ, ತಾವಿರುವ ನೆಲದ ಭಾಷೆಗೆ ಗೌರವ ಕೊಡಬೇಕು. ತಮಗೆ ಅನ್ನ-ಆಶ್ರಯ ನೀಡಿರುವ ನಾಡಿನ ಭಾಷೆಗೆ ಸಂಬಂಧಿಸಿದ ಯಾವುದೇ ಆಚರಣೆಯನ್ನು ವಿರೋಧಿಸುವುದು ಸೂಕ್ತವಲ್ಲ. ಅಂತಹ ಮನಃಸ್ಥಿತಿ ನಾಗರಿಕ ಲಕ್ಷಣವಲ್ಲ. ಮಲೆಯಾಳಿಯಾಗಿರಲಿ. ಮತ್ತಾವ ಭಾಷಿಕರಿರಲಿ, ಕನ್ನಡ ರಾಜ್ಯೋತ್ಸವದಂತಹ ಸಾಂಸ್ಕೃತಿಕ ಉತ್ಸವವನ್ನು ವಿರೋಧಿಸಿದರೆ, ಸರ್ಕಾರ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
-ಪರಿಷತ್ತು ಸರ್ಕಾರದ ಅನುದಾನದ ಇಕ್ಕಳದಲ್ಲಿ ಸಿಕ್ಕಿದೆ ಎಂದು ನನಗೆ ಅನಿಸುವುದಿಲ್ಲ. ಪರಿಷತ್ತಿನ ಘನತೆ, ಗಾಂಭೀರ್ಯಗಳಿಗೆ ಧಕ್ಕೆ ಒದಗಿದ ಒಂದೆರಡು ಸಂದರ್ಭದಲ್ಲಿ ಪ್ರವೇಶಿಸಿದ್ದರೂ, ಸರ್ಕಾರ ಎಂದೂ ಪರಿಷತ್ತಿನ ಕಾರ್ಯನಿರ್ವಹಣೆಯಲ್ಲಿ ಪ್ರವೇಶಿಸಿದ್ದನ್ನು ನಾನು ಕಂಡಿಲ್ಲ. ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಂತೆ ಪರಿಷತ್ತು ನೋಡಿಕೊಳ್ಳಬೇಕು. ಸಂದರ್ಭ ಬಂದಾಗ ಸರ್ಕಾರಕ್ಕೆ ತಿಳಿಹೇಳುವಷ್ಟು ಸ್ವಾತಂತ್ರ್ಯ ಪರಿಷತ್ತಿಗಿರಬೇಕು.
-ಈ ವಿಷಯಗಳಿಗೆ ಸರ್ಕಾರ ಕಿವಿಗೊಟ್ಟಿಲ್ಲ ಎಂದು ಹೇಳಲಾಗದಿದ್ದರೂ ಅವನ್ನು ಕೃತಿಗಿಳಿಸುವಲ್ಲಿ ಬದ್ಧವಾಗಿಲ್ಲ. ಈಗ ಆಡಳಿತದ ಕೆಳಹಂತಗಳಲ್ಲಿ ಬಹುತೇಕ ಕನ್ನಡ ಬಳಕೆಯಾಗುತ್ತಿದ್ದರೂ, ಮೇಲು ಹಂತಗಳಲ್ಲಿ ನಿರ್ಲಕ್ಷ್ಯವಿರುವಂತೆ ಕಾಣುತ್ತದೆ. ಈ ಕಾರಣದಿಂದಲೇ ಕನ್ನಡಪರ ಹೋರಾಟಗಾರರು ಹೋರಾಟ ನಡೆಸುತ್ತಲೇ ಇದ್ದಾರೆ. ಸರ್ಕಾರ ತಾನೇ ಕೈಗೊಂಡ ನಿರ್ಧಾರಗಳಿಗೆ ಬದ್ಧವಾಗದಿದ್ದರೆ ಹೇಗೆ? ಸಂವಿಧಾನದ ಚೌಕಟ್ಟಿನಲ್ಲೇ ಅನುಷ್ಠಾನಗೊಳಿಸಬಹುದಾದಂತಹ ವಿಚಾರಗಳ ಬಗೆಗೂ ಸರ್ಕಾರ ಉದಾಸೀನ ಮಾಡಿದರೆ, ಕನ್ನಡಿಗರ ಅಸಹನೆಯನ್ನು ಅನುಭವಿಸಬೇಕಾಗುತ್ತದೆ.
ಹಾಗೆಯೇ, ಉದ್ಯೋಗ ಸಮಸ್ಯೆಯ ಬಗೆಗೆ ಸರ್ಕಾರ ಅಂಗೀಕರಿಸಿರುವ ಸರೋಜಿನಿ ಮಹಿಷಿ ವರದಿಯ ವಿಷಯವೂ ಕ್ಲೀಷೆ ಎನಿಸುವಷ್ಟು ಪ್ರಸ್ತಾಪಗೊಂಡಿದೆ. ಆ ವರದಿ ಅಂಗೀಕಾರವಾಗಿ ದಶಕಗಳೇ ಕಳೆದರೂ ಅದು ಅನುಷ್ಠಾನಗೊಳ್ಳಲಿಲ್ಲ. ಡಾ.ಎಲ್.ಹನುಮಂತಯ್ಯನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಆ ವರದಿಯ ಪರಿಷ್ಕಾರಕ್ಕಾಗಿ ಸರ್ಕಾರ ರಚಿಸಿದ್ದ ಸಮಿತಿಯಲ್ಲಿ ನಾನೂ ಇದ್ದೆ. ಆ ಪರಿಷ್ಕೃತ ವರದಿಯನ್ನು ಪ್ರೊ.ಎಸ್.ಜಿ. ಸಿದ್ಧರಾಮಯ್ಯನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಸರ್ಕಾರಕ್ಕೆ ಸಲ್ಲಿಸಲಾಯಿತು. ಆದರೆ ಇದುವರೆಗೆ ಅದನ್ನು ವಿಧಾನ ಮಂಡಲದ ಮುಂದಿಟ್ಟು ಶಾಸನಬದ್ಧಗೊಳಿಸಿದಂತೆ ಕಾಣಲಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಯಾವುದೇ ಒತ್ತಡಗಳಿಗೆ ಮಣಿಯದೆ ತಕ್ಷಣ ಕ್ರಮಕೈಗೊಳ್ಳಬೇಕು.
-ನಾನು ಕಂಡಂತೆ, ಹಾಗೆ ಯಾವುದೇ ವರ್ಗದ ಸಾಹಿತಿಗಳು ಸಮ್ಮೇಳನದಿಂದ ದೂರ ಉಳಿಯಲು ಪರಿಷತ್ತಿನೊಡನೆ ತಮಗಿರುವ ಭಿನ್ನಾಭಿಪ್ರಾಯಗಳು ಕಾರಣವಿರಬಹುದು. ಭಿನ್ನಾಭಿಪ್ರಾಯಗಳು ಬೆಳವಣಿಗೆಯ ಲಕ್ಷಣವೆಂದೇ ನಾನು ತಿಳಿದಿದ್ದೇನೆ. ಅಂತಹ ಚರ್ಚೆಗಳು ಸಾಹಿತ್ಯದ ಬೆಳವಣಿಗೆಗೆ, ಪರಿಷತ್ತಿನ ಪ್ರಗತಿಗೆ ಸಹಾಯಕವಾಗುತ್ತವೆ. ಬಹುಶಃ ನಾನು ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದಾಗ ಅದುವರೆಗೂ ಪರಿಷತ್ತಿನ ಕಾರ್ಯಕಲಾಪಗಳನ್ನೇ ಬಹಿಷ್ಕರಿಸಿದ್ದ ಬಂಡಾಯ ಸಾಹಿತಿಗಳನ್ನು ಸಂರ್ಪಸಿ, ಸಮಾಲೋಚಿಸಿ, ಪರಿಷತ್ತಿನ ವೇದಿಕೆಯಲ್ಲೇ ಪ್ರಥಮ ಬಂಡಾಯ ಸಾಹಿತ್ಯ ಸಮಾವೇಶ ನಡೆಸಲಾಯಿತು. ಪರಿಷತ್ತು ಎಲ್ಲರನ್ನೂ ಒಳಗೊಳ್ಳಿಸಿಕೊಳ್ಳಬೇಕು. ಯಾವುದೇ ಪಂಥ-ಪಂಗಡಗಳ ಮರ್ಜಿಗೆ ಈಡಾಗಬಾರದು. ಪರಿಷತ್ತು ತನ್ನ ಮೂಲ ಧ್ಯೇಯೋದ್ದೇಶಕ್ಕೆ ಭಂಗಬಾರದಂತೆ ನೋಡಿಕೊಂಡರೆ, ಯಾರೂ ದೂರ ಉಳಿಯುವುದಿಲ್ಲ. ಸೈದ್ಧಾಂತಿಕ ದೃಷ್ಟಿಯಿಂದ ಎಡ-ಬಲ ಎಂದು ಕರೆಯುವುದು ರೂಢಿಯಾಗಿದ್ದರೂ, ಸಾಹಿತ್ಯದ ಮೂಲ ಆಶಯ ಜೀವನ ಸಿದ್ಧಾಂತ!
-ಸಮ್ಮೇಳನದ ಉದ್ದೇಶವೇ ಸಾಹಿತ್ಯ ಕುರಿತ ಚರ್ಚೆ. ಸಾಹಿತ್ಯ ಚರ್ಚೆಯೇ ಆಗುತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಇತ್ತೀಚಿನ ಸಮ್ಮೇಳನ ವೇದಿಕೆಗಳಲ್ಲಿ ಸಮಕಾಲೀನ ಸಮಸ್ಯೆಗಳನ್ನು ಕುರಿತ ಒಳ್ಳೆಯ ಚರ್ಚೆಗಳೂ ನಡೆಯುತ್ತಿವೆ. ಕಾಲದ ಅಗತ್ಯವನ್ನು ಗಮನದಲ್ಲಿ ಇಟ್ಟುಕೊಂಡು ಗೋಷ್ಠಿಗಳನ್ನು ರೂಪಿಸಬೇಕಾಗುತ್ತದೆ. ಗೋಷ್ಠಿಗಳ ವಿಷಯಗಳು ಮತ್ತು ಆ ವಿಷಯಗಳ ಬಗೆಗೆ ಮಾತನಾಡುವವರ ಆಯ್ಕೆಯಲ್ಲಿ ಯಾವುದೇ ಹಿತಾಸಕ್ತಿ ಇರಬಾರದು.
-ನಿರ್ದಿಷ್ಟ ಸಂಖ್ಯೆಯ ನೆನಪಿಲ್ಲ. ಅಸ್ಪಷ್ಟ ನೆನಪೆಂದರೆ 1993ರಲ್ಲಿ ಕೊಪ್ಪಳದಲ್ಲಿ ನಡೆದ ಸಮ್ಮೇಳನದಲ್ಲಿ ನಾನು ಪರಿಷತ್ತಿನ ಅಧ್ಯಕ್ಷನಾಗಿ ಒಂದು ಹೊಸ ಕಾರ್ಯಕ್ರಮವನ್ನು ಆರಂಭಿಸಿದ್ದೆ. ಗೀತ-ಸಂಗೀತ ಶೀರ್ಷಿಕೆಯಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ನಾಡಿನ ಬಹುತೇಕ ಸುಗಮ ಸಂಗೀತ ಕಲಾವಿದರು ಪ್ರಸಿದ್ಧ ಕವಿಗಳ ಕವನಗಳನ್ನು ಹಾಡಿದರು. ಇದು ಸಹಸ್ರ ಸಹಸ್ರ ಸಂಖ್ಯೆಯ ಸಹೃದಯರನ್ನು ಮಂತ್ರಮುಗ್ಧಗೊಳಿಸಿತೆನ್ನಬೇಕು. ಆ ಅಪೂರ್ವ ಪ್ರಯೋಗದ ಯಶಸ್ಸು ಮುಂದಿನ ಸಮ್ಮೇಳನಗಳಿಗೆ ನಾಂದಿಯಾಯಿತೆನ್ನಬಹುದು.
-ಈ ಭಾವನೆ ಇಂದಿನ ಸನ್ನಿವೇಶದಲ್ಲಿ ಸಹಜ. ಏಕೆಂದರೆ, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಇಂಗ್ಲಿಷ್ ಅಂತಾರಾಷ್ಟ್ರೀಯ ಸಂಪರ್ಕ ಭಾಷೆಯಾಗಿದ್ದು, ತಮ್ಮ ಮಕ್ಕಳು ಉದ್ಯೋಗಾದಿ ಅವಕಾಶಗಳಿಂದ ವಂಚಿತರಾಗಬಹುದೆಂದು ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕ ನಿವಾರಣೆಗಾಗಿ, ಮಕ್ಕಳು ಪ್ರಾಥಮಿಕ ಹಂತದಲ್ಲಿ ಕಲಿತನಂತರ, ಉದ್ಯೋಗಿತ್ಯಾದಿ ಅರ್ಹತೆಗೆ ಬೇಕಾದ ಇಂಗ್ಲಿಷಿನ ವ್ಯವಸ್ಥಿತ ಮತ್ತು ಪ್ರತ್ಯೇಕ ತರಬೇತಿ ನೀಡಬೇಕು. ಮಕ್ಕಳಿಗೆ ಬೇಕಾದದ್ದು ತರಬೇತಿಯೇ ವಿನಃ ಶಿಕ್ಷಣವಲ್ಲ. ಯಾವುದೇ ಕಾರಣದಿಂದ ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಅಥಾ ಬೇರಾವುದೇ ಭಾಷೆಯನ್ನೂ ಶಿಕ್ಷಣ ಮಾಧ್ಯಮವಾಗಿ ತುರುಕಬಾರದು.