ನ್ಯೂಸ್

ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ 'ಲಿಯೋ' ದಾಖಲೆ; ಒಟ್ಟು ಗಳಿಕೆಯೆಷ್ಟು? ಇಲ್ಲಿದೆ ಮಾಹಿತಿ

ಮೋಹನ್​ ಶೆಟ್ಟಿ

ತಮಿಳುನಾಡು: ಕಾಲಿವುಡ್​ನ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್​ ಮುಖ್ಯಭೂಮಿಕೆಯಲ್ಲಿ ನಟಿಸಿದ ಬಹುನಿರೀಕ್ಷಿತ 'ಲಿಯೋ' ಅಕ್ಟೋಬರ್​ 19 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿ ಬಿಡುಗಡೆಗೊಂಡು ಇಂದು ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ನಿರ್ಮಿಸುತ್ತಿದೆ.

ಲೋಕೇಶ್​ ಕನಕರಾಜ್​ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್​ ಇಂಡಿಯಾ 'ಲಿಯೋ' ಸಿನಿಮಾ ಕಾಲಿವುಡ್​ನಲ್ಲಿ ಮೊದಲ ವಾರ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ದಾಖಲೆಯನ್ನು ನಿರ್ಮಿಸಿತು. ಮೊದಲ ವಾರದಲ್ಲಿ ಚಿತ್ರ 461 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಲಿಯೋ ಪ್ರದರ್ಶನ ಜೋರಾಗಿದ್ದು, ಇತರ ರಾಜ್ಯಗಳಲ್ಲಿ ತಕ್ಕಮಟ್ಟಿಗೆ ಪ್ರದರ್ಶನ ಕಾಣುತ್ತಿದೆ.

ಇದೀಗ ವಿಜಯ್​ ಸಿನಿಮಾ ಅಮೆರಿಕಾ ಬಾಕ್ಸ್ ಆಫೀಸ್​ನಲ್ಲಿ 5 ಮಿಲಿಯನ್ ಡಾಲರ್ ಗಡಿ ದಾಟಿದೆ. ಇದು ಸಂಚಿತ ಒಟ್ಟು ಎಲ್ಲಾ ಆವೃತ್ತಿಗಳನ್ನು ಒಳಗೊಂಡಿದೆ. 2.0, ಪೊನ್ನಿಯಿನ್ ಸೆಲ್ವನ್ 1, ಪೊನ್ನಿಯಿನ್ ಸೆಲ್ವನ್ 2 ಮತ್ತು ಜೈಲರ್ ನಂತರ 'ಲಿಯೋ' ಈ ಸಾಧನೆ ಮಾಡಿದ ಐದನೇ ತಮಿಳು ಚಿತ್ರವಾಗಿದೆ.

ಈ ಹಿಂದೆ ತಮಿಳಿನ ತಲೈವರ್ ರಜನಿಕಾಂತ್ ಮಾತ್ರ ಯುಎಸ್​ನಲ್ಲಿ ಸಖತ್ ಮಾರ್ಕೆಟ್ ಹೊಂದಿದ್ದರು. ಆದ್ರೆ ಇದೀಗ ದಳಪತಿ ವಿಜಯ್ ಕೂಡ ತಮ್ಮ ಹೆಜ್ಜೆ ಗುರುತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರುವ ಲಿಯೋ ಚಿತ್ರಕ್ಕೆ ವಿಜಯ್​ ಫ್ಯಾನ್ಸ್​​ ಮತ್ತು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಈ ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).