ನವದೆಹಲಿ: ಜೂನ್ 21ರಂದು ನಡೆಯಲಿರುವ 6ನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಮುಖ ಕಾರ್ಯಕ್ರಮದ ಆತಿಥ್ಯವನ್ನು ಈ ಬಾರಿ ಕೇಂದ್ರಾಡಳಿತ ಪ್ರದೇಶ ಲಡಾಖ್ ರಾಜಧಾನಿ ಲೇಹ್ ವಹಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ ಎಂದು ಆಯುಷ್ ಸಚಿವಾಲಯ ಬುಧವಾರ ತಿಳಿಸಿದೆ.
ಜೂನ್ 21ರಂದು ಪ್ರಧಾನಿ ಮೋದಿ ಅವರು ಸಾಮಾನ್ಯ ಯೋಗಾ ಶಿಷ್ಠಾಚಾರ ಅಡಿಯಲ್ಲಿ ಯೋಗಾಸನ ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 15 ರಿಂದ 20 ಸಾವಿರ ಮಂದಿ ಭಾಗವಹಿಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಯುಷ್ ಸಚಿವ ಶ್ರೀಪಾದ್ ನಾಯಕ್, ಇದುವರೆಗೂ ನಡೆದಂತಹ ಯೋಗ ದಿನಾಚರಣೆಗಿಂತಲೂ ಈ ಬಾರಿ ತುಂಬಾ ವಿಭಿನ್ನ ಹಾಗೂ ವಿಶೇಷವಾಗಿರಲಿದೆ ಎಂದು ಭರವಸೆ ನೀಡುತ್ತೇವೆ. ಇದೇ ಮೊದಲ ಬಾರಿಗೆ ಅತ್ಯಂತ ಎತ್ತರದ ಸ್ಥಳ ಲೇಹ್ನಲ್ಲಿ ಹೆಚ್ಚಿನ ಸಂಖ್ಯೆಯ ಜನರೊನ್ನೊಳಗೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜೂನ್ 21ರ ಸಮಾರಂಭಕ್ಕೆ ಸಿಐಐ, ಎಫ್ಐಸಿಸಿಐ, ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಯಂತಹ ಕೈಗಾರಿಕ ಸಂಸ್ಥೆಗಳು ಮತ್ತು ಸಿಬಿಎಸ್ಇ, ಎನ್ಸಿಇಆರ್ಟಿ, ಯುಜಿಸಿ ಮತ್ತು ಡಿಎವಿಯಂತಹ ಶಿಕ್ಷಣ ಸಂಸ್ಥೆಗಳು ಕಾರ್ಯಕ್ರಮ ನೀಡಲು ತಯಾರಿ ನಡೆಸುತ್ತಿವೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ ಜಾರ್ಖಂಡ್ನ ರಾಂಚಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆದಿತ್ತು.
ಪ್ರಧಾನಿ ಮೋದಿ ಅವರ ಮನವಿಯಿಂದಾಗಿ 2015ರಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಾರಂಭವಾಯಿತು. ಪ್ರತಿ ವರ್ಷ ಜೂನ್ 21ರಂದು ನಡೆಯುವ ವಾರ್ಷಿಕ ಕಾರ್ಯಕ್ರಮವನ್ನು ಆಯುಷ್ ಸಚಿವಾಲಯದ ಅಡಿಯಲ್ಲಿ ನಡೆಯುತ್ತದೆ. (ಏಜೆನ್ಸೀಸ್)