ನ್ಯೂಸ್

ರಾಮಮಂದಿರಕ್ಕೆ ಭೂಮಿ ಪೂಜೆ ಸಂವಿಧಾನ ವಿರೋಧಿ; ಎಡಪಕ್ಷಗಳ ವಾದವೇನು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ನಡೆಲಾಗುತ್ತಿರುವ ಭೂಮಿ ಪೂಜೆ ಕಾರ್ಯಕ್ರಮ ಸುಪ್ರೀಂ ಕೋರ್ಟ್​ ತೀರ್ಪಿಗೆ ವಿರುದ್ಧವಾಗಿದೆ ಹಾಗೂ ಸಂವಿಧಾನದ ಆಶಯಗಳನ್ನು ಉಲ್ಲಂಘಿಸುತ್ತದೆ ಎಂದು ಎಡಪಕ್ಷಗಳು ಹೇಳಿವೆ.

ವಿವಾದವನ್ನು ಬಗೆಹರಿಸಿರುವ ಸುಪ್ರೀಂ ಕೋರ್ಟ್​ ತೀರ್ಪಿನಲ್ಲಿ ಕಟ್ಟಡವನ್ನು ಧ್ವಂಸಗೊಳಿಸಿದ್ದನ್ನು ಖಂಡಿಸಲಾಗಿದೆ. ಆದರೆ, ಕೇಂದ್ರ ಹಾಗೂ ಉತ್ತರಪ್ರದೇಶ ಸರ್ಕಾರಗಳು ಇದರಲ್ಲಿ ಪಾಲ್ಗೊಂಡಿರುವುದನ್ನು ನೋಡಿದರೆ, ಕಟ್ಟಡ ಧ್ವಂಸವನ್ನು ಶಾಸನಬದ್ಧಗೊಳಿಸಿದಂತಾಗಲಿದೆ ಎಂದು ಆಕ್ಷೇಪಿಸಿವೆ.

ಮಂದಿರ ನಿರ್ಮಾಣ ಕಾರ್ಯ ಟ್ರಸ್ಟ್​ ಮೂಲಕ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಹೇಳಿದೆ. ಆದರೆ, ಭೂಮಿಪೂಜೆ ಕಾರ್ಯಕ್ರಮವನ್ನು ಉತ್ತರಪ್ರದೇಶ ಸರ್ಕಾರ ಕೇಂದ್ರದ ಜತೆಗೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಸಂವಿಧಾನವು ಜಾತ್ಯತೀತತೆಯನ್ನು ಪ್ರತಿಪಾದಿಸಿದ್ದು, ಸರ್ಕಾರಗಳು ಒಂದು ಧರ್ಮದ ಜತೆಗೆ ಗುರುತಿಸಿಕೊಳ್ಳುವುದು ಸಂವಿಧಾನಬಾಹಿರವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ. ಧರ್ಮವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲು ಜನರು ಅವಕಾಶ ನೀಡಬಾರದೆಂದು ಮನವಿ ಮಾಡಿವೆ.