ನ್ಯೂಸ್

ಲೋಕಸಭೆ ಕಲಾಪ ವೇಳೆ ಭದ್ರತಾ ಲೋಪ; ನನ್ನ ಮಗನ ಬ್ರೈನ್​ವಾಶ್​ ಮಾಡಲಾಗಿದೆ ಎಂದ ಆರೋಪಿ ಸಾಗರ್ ಶರ್ಮಾ ತಂದೆ

ಲಖನೌ: ಇತ್ತೀಚೆಗಷ್ಟೇ ಉದ್ಘಾಟನೆಯಾದ ನೂತನ ಸಂಸತ್​ ಭವನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಉಂಟಾದ ಭದ್ರತಾ ಲೋಪ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ಕಳುಹಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರೋಪಿ ಸಾಗರ್​ ಶರ್ಮಾ ತಂದೆ ಆತನ ಬ್ರೈನ್​​ವಾಶ್ ಮಾಡಿ ಈ ರೀತಿಯ ಕೆಲಸವನ್ನು ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಾಗರ್​ ಶರ್ಮಾ ತಂದೆ ರೋಷನ್​ ಲಾಲ್​ ಶರ್ಮಾ ಈ ರೀತಿಯ ಕುಕೃತ್ಯ ಎಸಗಲು ನನ್ನ ಮಗ ಬೆಂಗಳೂರು ಮೂಲದ ಸ್ನೇಹಿತನಿಂದ ಪ್ರಭಾವಿತನಾಗಿದ್ದ. ಈ ರೀತಿಯ ಕೆಲಸ ಮಾಡುವ ಮೂಲಕ ಕುಟುಂಬದ ಮರ್ಯಾದೆ ಹಾಳು ಮಾಡಿದ್ದಾನೆ ಎಂದು ಕಿಡಿಕಾರಿದ್ದಾರೆ.

ಆತ ದೊಡ್ಡದಾಗಿ ಏನೋ ಮಾಡುವುದರ ಬಗ್ಗೆ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದ. ಆತ ತನ್ನ ಬೆಂಗಳೂರು ಮೂಲದಕ ಸ್ನೇಹಿತನೊಟ್ಟಿಗೆ ತುಂಬಾ ಹೊತ್ತು ಫೋನಿನಲ್ಲಿ ಮಾತನಾಡುತ್ತಿದ್ದುದ್ದನ್ನು ನಾನು ಹಲವು ಭಾರೀ ಗಮನಿಸಿದ್ದೆ. ಕುಟುಂಬದ ಮರ್ಯಾದೆ ತೆಗೆಯುವಂತಹ ಯಾವುದೇ ಕೆಲಸ ಮಾಡಿದರೂ ಸಹಿಸುವ ಮಾತಿಲ್ಲ ಎಂದು ಎಚ್ಚರಿಕೆ ನೀಡಿದ್ದರು ಸಹ ಆತ ಈ ರೀತಿ ಮಾಡಿದ್ದಾನೆ.

ಬೆಂಗಳೂರು ಮೂಲದ ಸ್ನೇಹಿತ ನನ್ನ ಮಗನ ಬ್ರೈನ್​ ವಾಶ್​ ಮಾಡಿದ್ದು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ಹೊರಡುವ ಮೊದಲು ಎರಡು ದಿನಗಳಲ್ಲಿ ಹಿಂತಿರುಗುವುದಾಗಿ ಹೇಳಿದ್ದ. ಆದರೆ, ಟಿವಿ ನೋಡಿದಾಗ ನಮಗೂ ತಿಳಿಯಿತು ಅವನು ಈ ರೀತಿಯ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆಂದು. ಸ್ನೇಹಿತರು ಅವನನ್ನು ದಾರಿ ತಪ್ಪಿಸಿದ್ದು, ಆತ ತಪ್ಪು ಮಾಡಿದ್ದರೆ ಕಠಿಣ ಶಿಕ್ಷೆಗೆ ಗುರಿಪಡಿಸಿ ಎಂದು ಸಾಗರ್​ ಶರ್ಮಾ ತಂದೆ ರೋಷನ್​ ಲಾಲ್​ ಶರ್ಮಾ ಆಗ್ರಹಿಸಿದ್ದಾರೆ.