ಮುಂಬೈ: ಕಳೆದ ತಿಂಗಳು ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಗಡ್ಚಿಂಚಾಲೆ ಎಂಬ ಗ್ರಾಮದಲ್ಲಿ ನಡೆದಿದ್ದ ಇಬ್ಬರು ಸಾಧುಗಳ ಹತ್ಯಾಕಾಂಡದ ಹಿಂದಿರುವ ಕೈವಾಡ ಯಾರದ್ದು, ಈ ಹತ್ಯೆ ನಡೆದದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಇದರ ರಹಸ್ಯ ಬಯಲಾಗುವ ಮುನ್ನವೇ ಸಾಧುಗಳ ಪರ ವಾದಿಸುತ್ತಿದ್ದ ವಕೀಲ ದಿಗ್ವಿಜಯ್ ತ್ರಿವೇದಿ (32) ನಿನ್ನೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ!
ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳ ಹತ್ಯೆ ಮಾಡಲಾಗಿದೆ ಎಂಬಂತೆ ಸುದ್ದಿ ಹರಡಿಸಲಾಗಿತ್ತು. ಇದೀಗ, ವಕೀಲ ದಿಗ್ವಿಜಯ್ ಅವರ ಸಾವು ಕೂಡ ಆಕಸ್ಮಿಕ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳು ಸೇರಿದಂತೆ ಮೂವರ ಬರ್ಬರ ಹತ್ಯೆ! ಪೊಲೀಸರ ಎದುರೇ ನಡೆಯಿತು ಘನಘೋರ ಕೃತ್ಯ
ದಿಗ್ವಿಜಯ್ ಅವರು ತಮ್ಮ ಸಹೋದ್ಯೋಗಿ ಪ್ರೀತಿ ತ್ರಿವೇದಿ ಅವರೊಂದಿಗೆ ಕೋರ್ಟ್ಗೆ ಹೋಗುತ್ತಿದ್ದ ವೇಳೆ ಮುಂಬೈ-ಅಹಮದಾಬಾದ್ ಹೆದ್ದಾರಿಯ ಚರೋತಿ ನಾಕಾ ಬಳಿ ವಾಹನದ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಅಪಘಾತ ಆಕಸ್ಮಿಕವೋ ಅಥವಾ ಕೊಲೆಯೋ ಎಂಬ ಗುಮಾನಿ ಶುರುವಾಗಿದೆ.
ಈ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವಂತೆ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಸಾಧುಗಳು ಈ ಗ್ರಾಮದ ಮಾರ್ಗವಾಗಿ ಹೋಗುತ್ತಿದ್ದ ಸಮಯದಲ್ಲಿ ಇಬ್ಬರನ್ನು ಹಾಗೂ ಅವರ ಕಾರುಚಾಲಕನನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಎಳೆದಾಡಿ ಹೊಡೆದು ಸಾಯಿಸಿದ್ದರು. ಅವರು ಎಷ್ಟೇ ಬೇಡಿಕೊಂಡರೂ, ಬಿಡದ ಗ್ರಾಮಸ್ಥರು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದರ ವೀಡಿಯೋ ವೈರಲ್ ಆಗಿ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯ ಹಿಂದೆ ಅನೇಕ ಅನುಮಾನಗಳು ಕೂಡ ಹುಟ್ಟಿಕೊಂಡಿದ್ದವು.
ಈ ಹತ್ಯೆ ಮಾಡಿರುವ ಹಿಂದೆ ಬೇರೆಯದ್ದೇ ಉದ್ಧೇಶವಿದೆ ಎಂದು ಹೇಳಲಾಗುತ್ತಿದೆ. ಆದರೆ ಅದರ ಸತ್ಯಾಂಶ ಇನ್ನೂ ಬಹಿರಂಗಗೊಳ್ಳಬೇಕಿದೆ. ಆದರೆ ಇದೀಗ ಇನ್ನೊಂದು ಘಟನೆ ಸಂಭವಿಸಿದೆ.
ಆದರೆ ಇದು ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾಲ್ಗರ್ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ 130ಕ್ಕೂ ಹೆಚ್ಚು ಆರೋಪಿಗಳಲ್ಲಿ 61 ಮಂದಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಬಾಲಾರೋಪಿ ಸೇರಿದಂತೆ ಒಟ್ಟು 113 ಆರೋಪಿಗಳ ವಿರುದ್ಧ ಕೇಸು ದಾಖಲಾಗಿದೆ.