ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ನೂತನ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಾಮಾಜಿಕ ಜಾಲತಾಣ ದೈತ್ಯ, ಟ್ವಿಟರ್‌ಗೆ ಖಡಕ್ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಗುರುವಾರ ಮಧ್ಯಾಹ್ನ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು "ಈ ನೆಲದ ಕಾನೂನು ಸರ್ವೋಚ್ಚ" ಎನ್ನುವ ಮೂಲಕ ಕೇಂದ್ರ ಹೊಸ ಐಟಿ ನಿಯಮಗಳನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ.
ಮೂರನೇ ವ್ಯಕ್ತಿಯ ವಿಷಯಗಳಿಗೆ ಸಾಮಾಜಿಕ ಜಾಲತಾಣ ವೆಬ್ಸೈಟ್ಗಳನ್ನು (50 ಲಕ್ಷಕ್ಕೂ ಹೆಚ್ಚು ಬಳಕೆದಾರರೊಂದಿಗೆ) ಹೊಣೆಗಾರರನ್ನಾಗಿ ಮಾಡುವ ಹೊಸ ಐಟಿ ನಿಯಮಗಳನ್ನು ಪಾಲಿಸುವ ಸಂಬಂಧ ಟ್ವಿಟರ್ ಮತ್ತು ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇದರ ನಡುವೆಯೇ ನೂತನ ಐಟಿ ಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ.
ಇಂದು ಬೆಳಿಗ್ಗೆ ದೆಹಲಿ ಹೈಕೋರ್ಟ್ಗೆ ಮಾಹಿತಿ ನೀಡಿರುವ ಟ್ವಿಟರ್, ರೆಸಿಡೆಂಟ್ ಗ್ರೀವಿಯನ್ಸ್ ಆಫೀಸರ್ ನೇಮಕ ಮಾಡಿಕೊಳ್ಳಲು 8 ವಾರಗಳ ಸಮಯ ಕೇಳಿದೆ. ಹೊಸ ನಿಯಮದ ಪ್ರಕಾರ ಭಾರತೀಯರನ್ನೇ ಗ್ರೀವಿಯನ್ಸ್ ಆಫೀಸರ್ ಆಗಿ ನೇಮಕ ಮಾಡಬೇಕು.
ನಿಯಮಗಳನ್ನು ಪಾಲಿಸಲು ವಿಫಲವಾಗಿದ್ದಕ್ಕೆ ನ್ಯಾಯಾಲಯವು ಟ್ವಿಟರ್‌ಗೆ ಎಚ್ಚರಿಕೆ ನೀಡಿದ ಎರಡು ದಿನಗಳ ನಂತರ ಟ್ವಿಟರ್ 8 ವಾರಗಳ ಕಾಲಾವಕಾಶವನ್ನು ಕೇಳಿದೆ. ಭಾರತ ಮೂಲದ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲು ಸರ್ಕಾರ ನಿಗದಿಪಡಿಸಿದ ಗಡುವನ್ನು ಕಂಪನಿ ಈಗಾಗಲೇ ಮೀರಿದೆ. (ಏಜೆನ್ಸೀಸ್)