| ಶಿವಾನಂದ ಹಿರೇಮಠ ಗದಗ
ಗ್ರಾಮೀಣ ಪ್ರದೇಶದ ಆರ್ಥಿಕ ಬಲವರ್ಧನೆಗೆ ಕಾರಣವಾಗಬೇಕಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಪ್ಯಾಕ್ಸ್) ಸ್ಥಳೀಯ ಮಂಡಳಿಗಳ ಆಡಳಿತವೈಖರಿಯಿಂದಾಗಿ ನಲುಗುತ್ತಿವೆ. ವಂಶಪಾರಂಪರ್ಯ ಆಡಳಿತ, ನೇಮಕಾತಿಯಲ್ಲಿ ಸಂಬಂಧಿಗಳಿಗೆ ಮನ್ನಣೆ, ಪ್ರಭಾವಿಗಳಿಗೆ ಶೂನ್ಯ ಬಡ್ಡಿದರ ಸಾಲ ನೀಡಿ ದುರ್ಬಳಕೆ ಒಂದೆಡೆಯಾದರೆ, ಇನ್ನೊಂದೆಡೆ, ರಾಜ್ಯದ 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ನಿರ್ದಿಷ್ಟ ವೇತನ ಶ್ರೇಣಿ, ಸೇವಾ ಭದ್ರತೆ ಮತ್ತು ಇತರ ಸೌಲಭ್ಯಗಳಿಲ್ಲವಾಗಿದೆ. ಪ್ರಸಕ್ತ ಅಧಿವೇಶನದಲ್ಲೂ ಇವರ ಸಮಸ್ಯೆ ಚರ್ಚೆಗೆ ಬಾರದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸ್ಥಳೀಯ ಆಡಳಿತ ಮಂಡಳಿಗಳ ನಡೆಯಿಂದ ಸರ್ಕಾರಕ್ಕೂ ಪ್ಯಾಕ್ಸ್ಗಳ ಮೇಲಿನ ಹಿಡಿತ ಕೈ ತಪ್ಪಿದೆ. ಹೀಗಾಗಿ ಗ್ರಾಮೀಣ ಜನರಿಗೆ ಆರ್ಥಿಕ ನೆರವು ಸೌಲಭ್ಯ ಕಲ್ಪಿಸಿ ನಿರ್ದಿಷ್ಟ ಗುರಿ ಸಾಧಿಸಲು ಪ್ಯಾಕ್ಸ್ಗಳಿಂದ ಸಾಧ್ಯವಾಗುತ್ತಿಲ್ಲ. ಈ ಎಲ್ಲ ನ್ಯೂನತೆಗಳನ್ನು ಸರಿಪಡಿಸಲು 1959ರ ಸಹಕಾರ ಕಾಯ್ದೆ ತಿದ್ದುಪಡಿ ಮಾಡಬೇಕೆಂಬ 70 ವರ್ಷಗಳ ಹೋರಾಟಕ್ಕೂ ಸರ್ಕಾರಗಳು ಕಿವಿಗೊಡುತ್ತಿಲ್ಲ. 2017ರಲ್ಲಿ ಸಹಕಾರ ಇಲಾಖೆ ಅಂದಿನ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರನ್ವಯ ಕಾಯ್ದೆಗೆ 98ಇಎ ಅನುಚ್ಛೇದ ಒಳಪಡಿಸಿ ಪ್ಯಾಕ್ಸ್ಗಳ ಮೇಲಿನ ನಿಯಂತ್ರಣ ಮತ್ತು ಆಡಳಿತ ಸುಧಾರಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಆಗಬೇಕೆಂಬುದು ಸಿಬ್ಬಂದಿಯ ಒತ್ತಾಯ.
ಇಚ್ಛಾಶಕ್ತಿ ಕೊರತೆ: 2006ರಲ್ಲಿ ಪ್ಯಾಕ್ಸ್ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ ಕೇರಳ ಮಾದರಿ ಮಂಡಳಿಗಳ ರಚನೆಗೆ ಮನವಿ ಮಾಡಿತ್ತು. ಆದರೆ, ಪ್ಯಾಕ್ಸ್ಗಳಲ್ಲಿ ರಾಜಕಾರಣಿಗಳು ಹಿಡಿತ ಸಾಧಿಸುವ ಉದ್ದೇಶದಿಂದ ಚುನಾವಣಾ ಮಂಡಳಿ ಸ್ಥಾಪನೆ ಮಾಡಿದ ರಾಜ್ಯ ಸರ್ಕಾರ ಇನ್ನುಳಿದ ಮಂಡಳಿ ಸ್ಥಾಪನೆಗೆ ಇಚ್ಛಾಶಕ್ತಿ ತೋರಿಸಲಿಲ್ಲ.
- ಸ್ಥಳೀಯ ಆಡಳಿತ ಮಂಡಳಿಯ ಸರ್ವಾಧಿಕಾರ ಧೋರಣೆ
- ಸರ್ಕಾರದ ಸಾಲ ಸೌಲಭ್ಯ ಅನರ್ಹರಿಗೆ ದೊರಕುತ್ತಿರುವುದು
- ಸಂಬಂಧಿಗಳ ನೇಮಕಾತಿ, ಅರ್ಹರಿಗೆ ಉದ್ಯೋಗ ವಂಚನೆ
- ಪ್ರಭಾವ ಬಳಸಿ ಶೂನ್ಯ ಬಡ್ಡಿದರ ಸಾಲ ಯೋಜನೆ ದುರ್ಬಳಕೆ
ಈಡೇರದ ಉದ್ದೇಶ: ಸ್ವಾತಂತ್ರ್ಯ ನಂತರ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಪ್ರತಿ ಗ್ರಾಮಕ್ಕೆ ಒಂದು ಕನ್ನಡ ಶಾಲೆ, ಗ್ರಾಪಂ ಮತ್ತು ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಶಾಲೆ ಮತ್ತು ಪಂಚಾಯಿತಿ ಅಭಿವೃದ್ಧಿ ಹೊಂದಿದರೂ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಿಲ್ಲ ಎಂಬುದು ವಿಪರ್ಯಾಸ.
ಪ್ಯಾಕ್ಸ್ ವೆಲ್ಫೇರ್ ಫೆಡರೇಷನ್ ಮತ್ತು ಸಿಬ್ಬಂದಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಅವರಿಗೆ ಒದಗಿಸಬಹುದಾದ ಸೌಲಭ್ಯಗಳ ಕುರಿತು ಚರ್ಚೆ ನಡೆಯುತ್ತಿದ್ದು, ಪರಿಶೀಲನೆ ಹಂತದಲ್ಲಿದೆ. | ಉಮಾ ಶಂಕರ್ ಸಹಕಾರ ಇಲಾಖೆ ಕಾರ್ಯದರ್ಶಿ ಪ್ಯಾಕ್ಸ್ಗಳಲ್ಲಿನ ಅಧಿಕಾರ ದುರ್ಬಳಕೆ ತಡೆಗಟ್ಟಲು ಮತ್ತು ಆಡಳಿತ ಸುಧಾರಣೆ, ತಂತ್ರಜ್ಞಾನ ಬಳಕೆ ಇತರ ಕಾರಣಗಳಿಂದ ಪ್ರಾಧಿಕಾರ ರಚನೆ ಅಗತ್ಯ. ಅಧಿವೇಶನದಲ್ಲಿ ಸಹಕಾರ ಸಚಿವರು ಕಾಯ್ದೆ ತಿದ್ದುಪಡಿ ಮಾಡಿ 30 ಸಾವಿರ ಸಿಬ್ಬಂದಿ ಕಲ್ಯಾಣಕ್ಕೆ ಶ್ರಮಿಸಬೇಕು. | ಡಿ.ಎಸ್. ಬಡಗಿಗೌಡರ ಪ್ಯಾಕ್ಸ್ ವೆಲ್ಫೇರ್ ಫೆಡರೇಷನ್ ಅಧ್ಯಕ್ಷ