ನವದೆಹಲಿ: ಹೆಚ್ಚಿನ ಪಿಂಚಣಿಯನ್ನು ಬಯಸುವವರಿಗಾಗಿ ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು EPFO (ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ) ಜುಲೈ 11ರವರೆಗೆ ವಿಸ್ತರಿಸಿದೆ. ಈ ಮೂಲಕ EPFO ಮೂರನೇ ಬಾರಿ ಗಡುವನ್ನು ಬಾರಿ ವಿಸ್ತರಿಸಿದಂತಾಗಿದೆ.
ಇಪಿಎಫ್ಒ ಹೊರಡಿಸಿದ ಪ್ರಕಟಣೆಯ ಪ್ರಕಾರ ಇಪಿಎಫ್ ಸದಸ್ಯರು ಹೆಚ್ಚುವರಿ ಪಿಂಚಣಿಗಾಗಿ (Higher Pension) ಅರ್ಜಿ ಸಲ್ಲಿಸಲು 2023 ಜೂನ್ 26ಕ್ಕೆ ಕೊನೆಯ ದಿನವಾಗಿತ್ತು . ಆದರೆ, ಪಿಂಚಣಿದಾರರಿಗೆ ಸಿಹಿ ಸುದ್ದಿ ನೀಡಿರುವ ಸರ್ಕಾರ, ಇದೀಗ ಮೂರನೇ ಬಾರಿಗೆ ಗಡುವು ವಿಸ್ತರಣೆ ಮಾಡಿದೆ. ಹೀಗಾಗಿ ಪಿಂಚಣಿದಾರರಿಗೆ ಜುಲೈ 11ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ. ಈ ಹಿಂದೆ ಎರಡು ಬಾರಿ ಗಡುವು ವಿಸ್ತರಿಸಲಾಗಿತ್ತು.
ಮೂಲ ಪ್ರಕಟಣೆ ಪ್ರಕಾರ 2023ರ ಮಾರ್ಚ್ 3ಕ್ಕೆ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಅದನ್ನು 2023ರ ಮೇ 3ಕ್ಕೆ ವಿಸ್ತರಿಸಲಾಯಿತು. ನಂತರ ಎರಡನೇ ಬಾರಿ ಗಡುವು ವಿಸ್ತರಣೆ ಆದಾಗ ಜೂನ್ 26 ಡೆಡ್ಲೈನ್ ಎಂದು ನಿಗದಿಯಾಗಿತ್ತು. ಆದರೆ, ಬಹಳ ಉದ್ಯೋಗಿಗಳಿಗೆ ಆನ್ಲೈನ್ನಲ್ಲಿ ಹೆಚ್ಚುವರಿ ಪೆನ್ಷನ್ಗೆ ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆ ಎದುರಾಗಿತ್ತು. ಈ ಕುರಿತಾಗಿ ಅನೇಕರು ಕಳೆದ ವಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮೂರನೇ ಬಾರಿ ಗಡುವನ್ನು ವಿಸ್ತರಣೆ ಮಾಡಲಾಗಿದೆ. ಹೊಸ ಗಡುವಿನ ಪ್ರಕಾರ ಜು.11 ಅಧಿಕ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
2014 ಸೆಪ್ಟಂಬರ್ 1ರಂದು ಅಥವಾ ಹಿಂದೆ ಇಪಿಎಫ್ ಮತ್ತು ಇಪಿಎಸ್ಗೆ ಸದಸ್ಯರಾದವರು ಹೆಚ್ಚುವರಿ ಇಪಿಎಸ್ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ. ಇಪಿಎಸ್ನಲ್ಲಿ ಸಂಬಳ ಮಿತಿ 15,000 ರೂ ಇತ್ತು. ಅದಕ್ಕಿಂತ ಹೆಚ್ಚಿನ ಸಂಬಳಕ್ಕೆ ಇದು ಸಿಗುವುದಿಲ್ಲ. 15,000 ರೂಗಿಂತ ಹೆಚ್ಚು ಸಂಬಳ ಪಡೆಯುತ್ತಿರುವವರಿಗೂ ಹೆಚ್ಚುವರಿ ಪಿಂಚಣಿ ಅವಕಾಶ ಕೊಡುವಂತೆ ಸುಪ್ರೀಂಕೋರ್ಟ್ ಕಳೆದ ವರ್ಷ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ 2014ರ ಸೆಪ್ಟಂಬರ್ 1 ಮತ್ತು ಅದಕ್ಕೂ ಹಿಂದಿನಿಂದ ಇಪಿಎಫ್ ಮತ್ತು ಇಪಿಎಸ್ ಸದಸ್ಯರಾದವರು ಹೆಚ್ಚುವರಿ ಪಿಂಚಣಿಗೆ ಅರ್ಜಿ ಸಲ್ಲಿಸಬಹುದು.
ಇಪಿಎಫ್ ಎಂದರೆ ಎಂಪ್ಲಾಯೀ ಪ್ರಾವಿಡೆಂಟ್ ಫಂಡ್. ಇಪಿಎಸ್ ಎಂಬುದು ಎಂಪ್ಲಾಯೀ ಪೆನ್ಷನ್ ಸ್ಕೀಮ್. ಇಪಿಎಫ್ನ ಹೆಚ್ಚುವರಿ ಜೋಡಣೆ ಇಪಿಎಸ್. ಇಪಿಎಫ್ ಸ್ಕೀಮ್ನಲ್ಲಿ ಉದ್ಯೋಗಿಯ ಮೂಲವೇತನ ಮತ್ತು ಡಿಎ ಸೇರಿ ಒಟ್ಟು ಮೊತ್ತದ ಶೇ. 12ರಷ್ಟು ಭಾಗವನ್ನು ಉದ್ಯೋಗಿಯ ಸಂಬಳದಿಂದ ಕಡಿತಗೊಳಿಸಿ ಇಪಿಎಫ್ ಖಾತೆಗೆ ಪ್ರತೀ ತಿಂಗಳು ಜಮೆ ಮಾಡಲಾಗುತ್ತದೆ. ಉದ್ಯೋಗದಾತ ಸಂಸ್ಥೆಯಿಂದಲೂ ಶೇ. 12ರಷ್ಟು ಹಣದ ಕೊಡುಗೆ ಇರುತ್ತದೆ. 15,000 ರೂ ಮತ್ತು ಅದಕ್ಕಿಂತ ಕಡಿಮೆ ಸಂಬಳ ಇದ್ದವರು ಇಪಿಎಫ್ ಜೊತೆಗೆ ಇಪಿಎಸ್ ಸ್ಕೀಮ್ ಸಿಗುತ್ತದೆ. ಸಂಸ್ಥೆ ಕೊಡುವ ಶೇ. 12ರಷ್ಟು ಹಣದಲ್ಲಿ ಇಪಿಎಫ್ಗೆ ಶೇ. 3.67ರಷ್ಟು ಹೋಗುತ್ತದೆ, ಇನ್ನುಳಿದ ಶೇ. 8.33ರಷ್ಟು ಹಣ ಇಪಿಎಸ್ಗೆ ಹೋಗುತ್ತದೆ.
ಇಪಿಎಸ್ ಎಂಬುದು ಕಟ್ಟುನಿಟ್ಟಾದ ಪಿಂಚಣಿ ಯೋಜನೆ. ಈ ಹಣ ಉದ್ಯೋಗಿ ನಿವೃತ್ತರಾದ ಬಳಿಕ ಪಿಂಚಣಿ ರೂಪದಲ್ಲಿ ಮಾತ್ರವೇ ಸಿಗುವಂಥದ್ದು. ಈಗ ಇಪಿಎಸ್ ಖಾತೆಗೆ ಹೆಚ್ಚು ಹಣ ಹಾಕುವ ಅವಕಾಶ ಉದ್ಯೋಗಿಗೆ ಸಿಕ್ಕಿದೆ. ಆದರೆ, ಹೆಚ್ಚುವರಿ ಪಿಂಚಣಿ ಪಡೆಯಲು ನೀವು 2014ರ ಸೆಪ್ಟಂಬರ್ 1ರಿಂದಲೂ ಅವರು ಇಪಿಎಫ್ ಮತ್ತು ಇಪಿಎಸ್ನ ಸದಸ್ಯರಾಗಿರಬೇಕು. (ಏಜೆನ್ಸೀಸ್)