ನ್ಯೂಸ್

ಸೇನಾ ಶಿಬಿರದಲ್ಲಿ ಭೂಕುಸಿತ: 3 ಸೈನಿಕರು ಸಾವು, ಹಲವರು ನಾಪತ್ತೆ | Military Camp In Sikkim

Military Camp: ಸಿಕ್ಕಿಂನ ಚಾಟನ್‌ನಲ್ಲಿ ಭಾನುವಾರ (ಜೂನ್​.1) ಸಂಜೆ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದು, ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಹವಾಲ್ದಾರ್ ಲಖ್ವಿಂದರ್ ಸಿಂಗ್, ಲ್ಯಾನ್ಸ್ ನಾಯಕ್ ಮುನೀಶ್ ಠಾಕೂರ್ ಮತ್ತು ಪೋರ್ಟರ್ ಅಭಿಷೇಕ್ ಲಖಾಡ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ನಾಲ್ವರು ಸೈನಿಕರನ್ನು ಸಣ್ಣಪುಟ್ಟ ಗಾಯಗಳೊಂದಿಗೆ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

" ಮೃತರ ಕುಟುಂಬಗಳಿಗೆ ಅಗತ್ಯ ಬೆಂಬಲ ನೀಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಭಾರತೀಯ ಸೇನೆಯು ತನ್ನ ಎಲ್ಲಾ ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳುವ ಬದ್ಧತೆಯಲ್ಲಿ ದೃಢವಾಗಿ ಉಳಿದಿದೆ, ಪ್ರಕೃತಿಯ ಕೋಪದ ನಡುವೆಯೂ ತನ್ನ ಅಚಲ ಮನೋಭಾವ ಮತ್ತು ಕರ್ತವ್ಯ ಸಮರ್ಪಣೆಯನ್ನು ಪ್ರದರ್ಶಿಸುತ್ತದೆ" ಎಂದು ಭಾರತೀಯ ಸೇನೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿದ್ದು, ಭಾರತೀಯ ಸೇನೆ ಸವಾಲಿನ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಹಗಲು-ರಾತ್ರಿ ಶ್ರಮಿಸುತ್ತಿವೆ.(ಏಜೆನ್ಸೀಸ್​)