ಮುಂಬೈ: ಮೂರನೇ ತ್ರೈಮಾಸಿಕ (Q3) ಫಲಿತಾಂಶಗಳು ಹೂಡಿಕೆದಾರರ ಉತ್ಸಾಹವನ್ನು ವರ್ಧಿಸಿವೆ. ಹೀಗಾಗಿ, ಈ ಕಂಪನಿಯ ಷೇರುಗಳು 2 ದಿನಗಳಲ್ಲಿ 40% ರಷ್ಟು ಏರಿಕೆ ಕಂಡಿದೆ. ಈ ಷೇರುಗಳಲ್ಲಿ ಹೂಡಿದ ಹಣವು 6 ತಿಂಗಳಲ್ಲಿ ದುಪ್ಪಟ್ಟಾಗಿದೆ.
ಶಕ್ತಿ ಪಂಪ್ಸ್ ಇಂಡಿಯಾ ಲಿಮಿಟೆಡ್ (Shakti Pumps (India) Ltd.) ಷೇರುಗಳಲ್ಲಿ ಈಗ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈಗ ಮಂಗಳವಾರ, ಜ. 30ರಂದು ಕೂಡ ಈ ಕಂಪನಿಯ ಷೇರುಗಳು ಶೇಕಡಾ 19ರಷ್ಟು ಏರಿಕೆಯೊಂದಿಗೆ 1523.90 ರೂಪಾಯಿ ತಲುಪಿದ್ದವು. ಇದು 52 ವಾರಗಳ ಗರಿಷ್ಠ ಬೆಲೆ ಕೂಡ ಆಗಿದೆ.
ಸೋಮವಾರ, ಜನವರಿ 29ರಂದು ಕೂಡ ಈ ಕಂಪನಿಯ ಷೇರುಗಳು ಶೇಕಡಾ 20 ರಷ್ಟು ಏರಿಕೆ ಕಂಡಿದ್ದವು. ಹೀಗಾಗಿ, ಕೇವಲ 2 ದಿನಗಳಲ್ಲಿ ಹೂಡಿಕೆದಾರರು ಶೇ. 40ರಷ್ಟು ಲಾಭ ಗಳಿಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಶಕ್ತಿ ಪಂಪ್ಸ್‌ನ ಷೇರಿನ ಬೆಲೆಯು ಶೇಕಡಾ 44 ರಷ್ಟು ಹೆಚ್ಚಾಗಿದೆ. ಕಂಪನಿಯ ಷೇರುಗಳ ಬೆಲೆ ಕಳೆದ 6 ತಿಂಗಳಲ್ಲಿ ಶೇ.106ರಷ್ಟು ಏರಿಕೆಯಾಗಿದೆ. ಒಂದು ವರ್ಷದ ಅವಧಿಯಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಶೇಕಡಾ 244 ರಷ್ಟು ಗಳಿಸಿದೆ.
ಸೋಮವಾರ ಕಂಪನಿಯ ಬಗ್ಗೆ ಒಳ್ಳೆಯ ಸುದ್ದಿ ಬಂದಿದೆ. ಮಧ್ಯಪ್ರದೇಶ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನಿಂದ 46 ಎಕರೆ ಭೂಮಿಯನ್ನು ಪಡೆದಿರುವುದಾಗಿ ಕಂಪನಿಯು ಜನವರಿ 29 ರಂದು ತಿಳಿಸಿದೆ. ಕಂಪನಿಯು ಈ ಭೂಮಿಯನ್ನು A-10 ಮತ್ತು B-86 ಸ್ಮಾರ್ಟ್ ಇಂಡಸ್ಟ್ರಿಯಲ್ ಟೌನ್‌ಶಿಪ್, ಸೆಕ್ಟರ್-7, ಪಿತಾಮ್‌ಪುರ ಇಂದೋರ್‌ನಲ್ಲಿ ಪಡೆದುಕೊಂಡಿದೆ. ಈ ಭೂಮಿಯನ್ನು ಭವಿಷ್ಯದ ವಿಸ್ತರಣೆಗೆ ಬಳಸಲಾಗುವುದು ಎಂದು ಕಂಪನಿ ತಿಳಿಸಿದೆ.
ಶಕ್ತಿ ಪಂಪ್ಸ್ ತನ್ನ ತ್ರೈಮಾಸಿಕ ಫಲಿತಾಂಶಗಳನ್ನು ಜನವರಿ 27 ರಂದು ಪ್ರಕಟಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ 495.60 ಕೋಟಿ ರೂ. ಆಗಿದೆ. ಇದು ಕಳೆದ ವರ್ಷದ ಡಿಸೆಂಬರ್ ತ್ರೈಮಾಸಿಕಕ್ಕಿಂತ ಶೇ 57ರಷ್ಟು ಹೆಚ್ಚಾಗಿದೆ. ಶಕ್ತಿ ಪಂಪ್ಸ್ ಇಂಡಿಯಾ ಲಿಮಿಟೆಡ್ ಪಂಪ್ ಮತ್ತು ಮೋಟಾರ್ ತಯಾರಿಸುವ ಬೃಹತ್ ಕಂಪನಿಯಾಗಿದೆ.