ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah), ನವೆಂಬರ್ 11 ರಂದು ನಡೆಯುವ ಎರಡನೇ ಹಂತದ ಮತದಾನದಲ್ಲಿ ಬಿಜೆಪಿಯ ಕಮಲದ ಚಿಹ್ನೆ ಅಥವಾ ಜೆಡಿಯುನ ಬಾಣದ ಚಿಹ್ನೆಯಿಂದ ನೀವು ದೂರ ಸರಿದರೆ ಜಂಗಲ್ ರಾಜ್ ಆಡಳಿತ ಆಳ್ವಿಕೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಜಮುಯಿ ಮತ್ತು ಭಾಗಲ್ಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಷಾ, ಜಂಗಲ್ ರಾಜ್ ಆಡಳಿತ ಆಳ್ವಿಕೆ ಬರಲು ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು. ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಮುಯಿ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು. ನಾಲ್ಕೂ ಸ್ಥಾನಗಳು ಎನ್‌ಡಿಎಗೆ ಗೆಲುವು ಸಾಧಿಸುವಂತೆ ನೋಡಿಕೊಳ್ಳಲು ಜನರಿಗೆ ಮನವಿ ಮಾಡಿದರು.
ಇದನ್ನೂ ಓದಿ:ಸೈಬರ್ ಕಾನೂನು-ಅಪರಾಧ ಕುರಿತ ಸಮ್ಮೇಳನ, ಅಂತರ್ಜಾಲದ ಬಳಕೆಯಲ್ಲಿ ಜಾಗೃತೆ ಇರಲಿ ಎಂದ ಎಸ್ಪಿ ಲಕ್ಷ್ಮಣ ನಿಂಬರಗಿ
ನಕ್ಸಲ್ ಪ್ರಭಾವವನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಯತ್ನ ನಡೆಸುತ್ತಿದ್ದು, ನಕ್ಸಲ್ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಜಮುಯಿನಂತಹ ಪ್ರದೇಶಗಳಲ್ಲಿ ನಕ್ಸಲರು ಧನ್ಬಾದ್ ಪಾಟ್ನಾ ಎಕ್ಸ್‌ಪ್ರೆಸ್ ಅನ್ನು ಅಪಹರಿಸಿ ಮೂವರನ್ನು ಕೊಂದ ಘಟನೆಯನ್ನು ನೆನಪಿಸಿಕೊಂಡರು. ನಾವು ಗೆದ್ದರೆ, ಬಿಹಾರವನ್ನು ಪ್ರವಾಹದಿಂದ ಮುಕ್ತಗೊಳಿಸಲು ಹೊಸ ಇಲಾಖೆಯನ್ನು ರಚಿಸುತ್ತೇವೆ. ಲಾಲು ಅವರ ಮಗ ಗೆದ್ದರೆ ಅಪಹರಣ ಎಂಬ ಹೊಸ ಇಲಾಖೆಯನ್ನೇ ತೆರೆಯಲಿದ್ದಾರೆ ಎಂದು ಹೇಳಿದರು. ರಸ್ತೆಗಳು, ಸೇತುವೆಗಳು ಮತ್ತು ಕಾರ್ಖಾನೆಗಳು ಸೇರಿದಂತೆ ಹೊಸ ಮೂಲಸೌಕರ್ಯ ಯೋಜನೆಗಳಿಗೆ ಒತ್ತು ನೀಡುವ ಮೂಲಕ ಎನ್‌ಡಿಎ ಅಭಿವೃದ್ಧಿಯತ್ತ ಗಮನಹರಿಸುವುದನ್ನು ಮುಂದುವರಿಸುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ರಾಹುಲ್ ಗಾಂಧಿಯವರ ನಿರಂತರ ಮತಗಳ್ಳತನ ಆರೋಪ, ಸತ್ಯಾಸತ್ಯತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ | Vote Rigging
ಲಾಲು ಪ್ರಸಾದ ತಮ್ಮ ಮಗನೊಂದಿಗೆ ಕುಳಿತು ಶಹಾಬುದ್ದೀನ್ ಮಗನಿಗೆ ಟಿಕೆಟ್ ನೀಡುತ್ತಿರುವ ಅಚ್ಚರಿಯ ದೃಶ್ಯವನ್ನು ನಾನು ನೋಡಿದ್ದೇನೆ. ಲಾಲು ಮಗ 'ಶಹಾಬುದ್ದೀನ್ ಅಮರ್ ರಹೇ' ಎಂಬ ಘೋಷಣೆಯನ್ನು ಕೂಗುತ್ತಿರುವುದು ಕಂಡುಬರುತ್ತದೆ. ಭಾಗಲ್ಪುರದ ಜನರೇ, ನೀವು ಈ ಹಿಂದಿನ ಗಲಭೆಗಳನ್ನು ಮರೆತಿದ್ದೀರಾ? ನೀವು ಮತ್ತೆ ಆ ಸಮಯ ಬರಬೇಕೆಂದು ಬಯಸುತ್ತೀರಾ? ಶಹಾಬುದ್ದೀನ್ ಮಗ ಒಸಾಮಾ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಒಸಾಮಾ ಗೆದ್ದರೆ, ಭಾಗಲ್ಪುರದಲ್ಲಿ ಮತ್ತೆ ಗಲಭೆಗಳು ನಡೆಯುತ್ತವೆ. ಬಿಜೆಪಿ ಗೆದ್ದರೆ, ಭಾಗಲ್ಪುರದಲ್ಲಿ ನೀವೆಲ್ಲಾ ಅಭಿವೃದ್ಧಿಯನ್ನು ನೋಡುತ್ತೀರಿ ಎಂದು ಹೇಳಿದರು.(ಏಜೆನ್ಸೀಸ್)