ನ್ಯೂಸ್

ರಜನಿಕಾಂತ್ ಪುತ್ರಿ ನಿರ್ದೇಶನದ 'ಲಾಲ್ ಸಲಾಂ'; ಚಿತ್ರದ ಬಗ್ಗೆ ಇಲ್ಲಿದೆ ಕುತೂಹಲಕಾರಿ ವಿಷಯ!

ತಮಿಳುನಾಡು: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ರಜನಿಕಾಂತ್​ ಪುತ್ರಿ ಐಶ್ವರ್ಯ ರಜನಿಕಾಂತ್​ ನಿರ್ದೇಶನದ ಕ್ರೀಡಾ ಆಧರಿತ ಚಿತ್ರ 'ಲಾಲ್ ಸಲಾಂ' ಟೀಸರ್​ ಇಂದು ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರನ್ನು ಮತ್ತಷ್ಟು ಕುತೂಹಲಕ್ಕೆ ದೂಡಿದೆ. ಈ ಚಿತ್ರದಲ್ಲಿ ತಲೈವಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿರುವ 'ಲಾಲ್​ ಸಲಾಂ' 2024ರ ಸಂಕ್ರಾಂತಿ ಹಬ್ಬದ ಸಮಯಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಸದ್ಯ ಚಿತ್ರದ ಟೀಸರ್​ ಉತ್ತಮ ರೀತಿಯಲ್ಲಿ ಮೂಡಿಬಂದಿದ್ದು, ಒಂದು ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ. ರಜನಿಕಾಂತ್​ ಅವರ ಎಂಟ್ರಿ ಟೀಸರ್​ಗೆ ಮತ್ತಷ್ಟು ಮೆರುಗು ನೀಡಿದೆ ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ.

ಬರೋಬ್ಬರಿ 7 ವರ್ಷಗಳ ನಂತರ ಇದೀಗ ಮತ್ತೊಮ್ಮೆ ನಿರ್ದೇಶನದ ಕ್ಯಾಪ್ ತೊಟ್ಟ ಐಶ್ವರ್ಯ ರಜನಿಕಾಂತ್​, ಈ ಸಿನಿಮಾದ ಮುಖೇನ ಸಿನಿಪ್ರೇಕ್ಷಕರು ಹಾಗೂ ತಮ್ಮ ತಂದೆಯ ಅಭಿಮಾನಿಗಳ ಬಳಗವನ್ನು ಮನರಂಜಿಸಲು ಸಕಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

ಈ ಚಿತ್ರದಲ್ಲಿ ರಜನಿಕಾಂತ್​, ವಿಕ್ರಾಂತ್​, ವಿಷ್ಣು ವಿಶಾಲ್​, ಕಪಿಲ್ ದೇವ್, ಜೀವಿತಾ ರಾಜಶೇಖರ್, ನಿರೋಷಾ, ತಂಬಿ ರಾಮಯ್ಯ ಮುಂತಾದವರ ತಾರಾಗಣವಿದೆ. ಲೈಕಾ ಪ್ರೊಡಕ್ಷನ್ಸ್‌ನ ಸುಬಾಸ್ಕರನ್ ನಿರ್ಮಿಸಿದ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯಿದೆ,(ಏಜೆನ್ಸೀಸ್).