ನ್ಯೂಸ್

ಲಖೀಂಪುರ್​ ಖೇರಿ ಕೇಸ್​: ಕೇಂದ್ರ ಸಚಿವರ ಪುತ್ರನಿಗೆ ಪೊಲೀಸ್​ ಸಮನ್ಸ್

ಲಖನೌ: ಲಖೀಂಪುರ್​ ಖೇರಿಯಲ್ಲಿ ರೈತರ ಮೇಲೆ ಕಾರು ಹಾಯಿಸಿದ ಆರೋಪ ಎದುರಿಸುತ್ತಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಅವರ ಮಗ ಆಶಿಶ್ ಮಿಶ್ರ ವಿಚಾರಣೆ ನಡೆಸಲು ಉತ್ತರಪ್ರದೇಶ ಪೊಲೀಸರು ಇದೀಗ ಮುಂದಾಗಿದ್ದಾರೆ. ಮಿಶ್ರ ವಿರುದ್ಧ ಸೋಮವಾರವೇ ಎಫ್​.ಐ,ಆರ್​. ದಾಖಲಾಗಿದ್ದರೂ, ಇಂದು ಸುಪ್ರೀಂ ಕೋರ್ಟ್​ ಯುಪಿ ಪೊಲೀಸರನ್ನು ಪ್ರಕರಣದ ಪ್ರಗತಿಯ ಬಗ್ಗೆ ತರಾಟೆಗೆ ತೆಗೆದುಕೊಂಡ ನಂತರ ಸಮನ್ಸ್​ ಜಾರಿಯಾಗಿದೆ.

"ಆಶಿಶ್ ಮಿಶ್ರಗೆ ಸಮನ್ಸ್ ನೀಡಲಾಗಿದೆ. ಆದಷ್ಟು ಬೇಗ ವಿಚಾರಣೆಗೆ ಬರುವಂತೆ ಕೋರಲಾಗಿದೆ. ವಿಚಾರಣೆ ನಂತರ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು" ಎಂದು ಲಖನೌ ವಲಯದ ಇನ್ಸ್‌ಪೆಕ್ಟರ್ ಜನರಲ್ ಲಕ್ಷ್ಮಿ ಸಿಂಗ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

"ನಾವು ಯಾರನ್ನೂ ರಕ್ಷಿಸುತ್ತಿಲ್ಲ. ದೇಶದ ಕಾನೂನು ಎಲ್ಲರಿಗೂ ಸಮಾನವಾಗಿದೆ. ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಖಚಿತಪಡಿಸುತ್ತೇವೆ" ಎಂದು ಸಿಂಗ್ ಹೇಳಿದರು. ಪೊಲೀಸರು 13 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಂದು ಇಬ್ಬರನ್ನು ವಿಚಾರಣೆ ಮಾಡಲಾಗಿದೆ ಎಂದರು. (ಏಜೆನ್ಸೀಸ್)