ಅಮೆರಿಕ: ಗಂಡ ಮನೆಯಲ್ಲಿಲ್ಲದ ಬಗ್ಗೆ ತೀವ್ರ ಬೇಸರಕ್ಕೆ ಒಳಗಾಗಿದ್ದ ಮಹಿಳೆಯೊಬ್ಬಳು ಐವರು ಮಕ್ಕಳನ್ನು ಗುಂಡಿಟ್ಟು ಕೊಂದಿದ್ದಲ್ಲದೆ, ಮನೆಗೂ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾಳೆ. ಬೆಂಕಿ ನಂದಿಸಲು ಧಾವಿಸಿದ್ದ ಅಗ್ನಿಶಾಮಕ ದಳದವರಿಂದಾಗಿ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ.
ಐವರು ಮಕ್ಕಳ ಈ ತಾಯಿಯ ಶವ ಕೂಡ ಮನೆಯಲ್ಲಿ ಪತ್ತೆಯಾಗಿದ್ದು, ಪತಿಯ ಅನುಪಸ್ಥಿತಿ, ಅದರಿಂದ ಬೇಸತ್ತ ಪತ್ನಿಯ ಮನಸ್ಥಿತಿ ಇಡೀ ಕುಟುಂಬವನ್ನು ಬಲಿ ಪಡೆದುಕೊಂಡಂತಾಗಿದೆ. ಅಂದಹಾಗೆ ಅಮೆರಿಕದ ಪಶ್ಚಿಮ ವರ್ಜಿನಿಯಾದಲ್ಲಿ ಈ ಪ್ರಕರಣ ನಡೆದಿದೆ. ವಿಲಿಯಂಸ್ಬರ್ಗ್ನ ಮನೆಯೊಂದಕ್ಕೆ ಬಿದ್ದ ಬೆಂಕಿಯನ್ನು ನಂದಿಸಲು ಹೋದ ಅಗ್ನಿಶಾಮಕ ತಂಡಕ್ಕೆ ಈ ಅಪರಾಧದ ಸುಳಿವು ಸಿಕ್ಕಿದ್ದಾಗಿ ಪ್ರಕರಣದ ಪೂರ್ಣ ತನಿಖೆಯಿಂದ ಅಸಲಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
25 ವರ್ಷದ ಒರಿಯಾನಾ ಮೆಯರ್ಸ್ ಎಂಬಾಕೆಯ ವಿಲಿಯಮ್ಸ್ಬರ್ಗ್ನ ಮನೆಯೊಂದಕ್ಕೆ ಕಳೆದ ಡಿಸೆಂಬರ್ 8 ರಂದು ಸಂಜೆ 4 ಗಂಟೆಗೆ ಬೆಂಕಿ ಬಿದ್ದಿತ್ತು. ಬೆಂಕಿ ಆರಿಸಲು ಧಾವಿಸಿದ್ದ ಅಗ್ನಿಶಾಮಕ ದಳದವರಿಗೆ ಮನೆ ಸಮೀಪದ ಪಿಕ್ನಿಕ್ ಟೇಬಲ್ ಬಳಿ ತಲೆಗೆ ಗುಂಡು ಬಿದ್ದು ಸತ್ತಿರುವ ಒರಿಯಾನಾಳ ಶವ ಮತ್ತು ಬಂದೂಕು ಪತ್ತೆಯಾಗಿವೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ಎರಡು ದಿನಗಳ ಕಾರ್ಯಾಚರಣೆಯಲ್ಲಿ ಐವರೂ ಮಕ್ಕಳ ಶವಗಳನ್ನು ಹೊರತೆಗೆಯಲಾಗಿದೆ. ಮಕ್ಕಳು ಕೊಲೆಯಾಗಿರುವುದನ್ನು ವೈದ್ಯರ ವರದಿ ದೃಢೀಕರಿಸಿದೆ ಎಂದು ಗ್ರೀನ್ಬ್ರಿಯರ್ ಕೌಂಟಿ ಶೆರೀಫ್ ಬ್ರೂಸ್ ಸ್ಲೋನ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಮನೆಯ ಪಾರ್ಕಿಂಗ್ನಲ್ಲಿದ್ದ ವಾಹನದಲ್ಲಿ ಜಿಪ್ಲಾಕ್ ಕವರ್ನಲ್ಲಿ ಮೂರು ಕೈಬರಹದ ಪತ್ರಗಳು ಪೊಲೀಸರಿಗೆ ಸಿಕ್ಕಿವೆ. ಅದರಲ್ಲಿ 'ನನ್ನ ತಪ್ಪೊಪ್ಪಿಗೆ' ಎಂದು ಬರೆದ ಪತ್ರದಲ್ಲಿ "ಎಲ್ಲಾ ಹುಡುಗರಿಗೂ ತಲೆಗೆ ಗುಂಡು ಹೊಡೆದಿದ್ದೇನೆ, ಮನೆಗೆ ಬೆಂಕಿ ಹಚ್ಚಿದ್ದೇನೆ, ನಾನೂ ತಲೆಗೆ ಗುಂಡು ಹಾರಿಸಿಕೊಂಡಿದ್ದೇನೆ" ಎಂದು ಒರಿಯಾನಾ ಬರೆದಿದ್ದಾಳೆ.
ಒರಿಯಾನಾ ಸಾಯಿಸಿದ ಐವರು ಮಕ್ಕಳಲ್ಲಿ ಮೂರು ಅವಳ ಸ್ವಂತ ಮಕ್ಕಳು - ನಾಲ್ಕು ವರ್ಷ, ಮೂರು ವರ್ಷ ಮತ್ತು ಒಂದು ವರ್ಷ ವಯಸ್ಸಿನವು; ಮತ್ತೆರಡು ಆಕೆಯ ಮಲಮಕ್ಕಳು - ಏಳು ವರ್ಷ ಮತ್ತು ಆರು ವರ್ಷದವು ಎನ್ನಲಾಗಿದೆ. ಈ ಕೃತ್ಯ ಎಸಗಿರುವ ಮುಂಚಿನ ಕೆಲವು ದಿನಗಳಲ್ಲಿ ತನ್ನ ಪತಿಗೆ ಆ ವಾರ ಮನೆಯಲ್ಲಿ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಹಲವು ಟೆಕ್ಸ್ಟ್ ಸಂದೇಶಗಳನ್ನು ಆಕೆ ಕಳುಹಿಸಿದ್ದಳು ಎಂದು ಅಧಿಕಾರಿ ಸ್ಲೋನ್ ತಿಳಿಸಿದ್ದಾರೆ.
ತನ್ನ ಪತ್ರದಲ್ಲಿ "ಮಾನಸಿಕ ಆರೋಗ್ಯ ಗಂಭೀರ ವಿಷಯ, ಜೋಕ್ ಅಥವಾ ಉಡಾಫೆ ಮಾಡುವ ವಿಷಯವಲ್ಲ.. ಮುಂದೊಂದು ದಿನ ಯಾರಾದರೂ ನನ್ನಂಥವರಿಗೆ ಸಹಾಯ ಮಾಡುವರೆಂದು ಆಶಿಸುತ್ತೇನೆ. ಯಾರಾದರೂ ಸಹಾಯಕ್ಕಾಗಿ ಗೋಗರೆದು ಕೇಳಿದಾಗ, ದಯವಿಟ್ಟು ಅವರಿಗೆ ಸಹಾಯ ಮಾಡಿ. ನೀವು ಒಂದು ಅಥವಾ ಹೆಚ್ಚು ಜೀವಗಳನ್ನು ಉಳಿಸಬಹುದು" ಎಂದೂ ಒರಿಯಾನಾ ಬರೆದಿದ್ದಾಳೆ ಎನ್ನಲಾಗಿದೆ.
ತನಿಖೆ ನಡೆಸುತ್ತಿದ್ದಾಗ ಪೊಲೀಸರಿಗೆ ಮಕ್ಕಳ ತಂದೆಗೆ ಬರೆಯಲಾಗಿದ್ದ ಮತ್ತೊಂದು ಪತ್ರ ಸಿಕ್ಕಿದೆ. ಅದರಲ್ಲಿ, "ನಾನು ಈ ಕುಟುಂಬಕ್ಕಾಗಲಿ ನಿನಗಾಗಲಿ ಬೇಕಾದಷ್ಟು ಸ್ಟ್ರಾಂಗ್ ಆಗಿರಲಿಲ್ಲ. ಈ ಕೆಟ್ಟ ಅಪರಾಧಕ್ಕೆ ನನ್ನನ್ನು ಕ್ಷಮಿಸು" ಎಂದು ಬರೆದಿರುವ ಒರಿಯಾನಾ, ಮಾನಸಿಕವಾಗಿ ಕುಗ್ಗಿಹೋಗಿ ಈ ಕೃತ್ಯ ಎಸಗಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್)