ನ್ಯೂಸ್

ಹೀರೋಗಳನ್ನ ಆರಾಧಿಸುವುದನ್ನು ಮೊದಲು ನಿಲ್ಸಿ; ನಟಿ ಖುಷ್ಬೂ ಹೀಗೆನ್ನಲು ಕಾರಣವೇನು?| Kushboo

ಚೆನ್ನೈ: ನಟನೆ ಮಾತ್ರವಲ್ಲದೇ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಟಿ ಖುಷ್ಬೂ ಸುಂದರ್ (Kushboo Sundar) ಕನ್ನಡಿಗರಿಗೆ ಚಿರಪರಿಚಿತ ಮುಖ ಎಂದರೆ ತಪ್ಪಾಗಲಾರದು. ತಮ್ಮ ನಟನೆಯ ಮೂಲಕ 90ರ ದಶಕದಲ್ಲಿ ಪಡ್ಡೆಹುಡುಗರ ನಿದ್ದೆ ಕದ್ದಿದ್ದ ಖುಷ್ಬೂ ಸದ್ಯ ರಾಜಕೀಯದಲ್ಲಿ ಸಕ್ರಿವಾಗಿದ್ದು, ಹೆಚ್ಚಾಗಿ ಸಿನಿಮಾ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಚಿತ್ರರಂಗದಲ್ಲಿ ಖಾನ್​ತ್ರಯರ ಪಾರುಪತ್ಯದ ಕುರಿತು ಮಾತನಾಡಿದ್ದು, ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತಾಗಿ ಮಾತನಾಡಿರುವ ಖುಷ್ಬೂ (Kushboo), ಮಹಿಳಾ ಪ್ರಧಾನ ಸಿನಿಮಾಗಳು ಪ್ರತಿಬಾರಿಯೂ ಬ್ಲಾಕ್‌ಬಸ್ಟರ್ ಆಗಲು ಅವಕಾಶವಿಲ್ಲ. ಪುರುಷ ಪ್ರಧಾನ ಸಿನಿಮಾಗಳಿಗೆ ಸಿಗುವಷ್ಟು ಪ್ರಾತಿನಿಧ್ಯ ಮಹಿಳೆಯರ ಸಿನಿಮಾಗಳಿಗೆ ಸಿಗುವುದಿಲ್ಲ. ಅರಮನೆ 4 ಮತ್ತು ಮೂಕುತಿ ಅಮ್ಮನ್ 2 ನಂತಹ ಮಹಿಳಾ ಪ್ರಧಾನ ಚಿತ್ರಗಳು ಒಮ್ಮೊಮ್ಮೆ ಮಾತ್ರ ಬರುತ್ತವೆ. ಮೊದಲಿಗೆ ಹೀರೋಗಳನ್ನು ಆರಾಧಿಸುವುದನ್ನು ನಿಲ್ಲಿಸಬೇಕು. ಇದು ಬದಲಾಗಲು ಸಾಕಷ್ಟು ಸಮಯ ಬೇಕಿದೆ. 

ಮಹಿಳಾ ಪ್ರಧಾನ ಸಿನಿಮಾಗಳು ಹಿಟ್ ಆಗಲು ಅವಕಾಶವಿಲ್ಲ. ಕಾಲ ಬದಲಾಗಿದೆ ಎಂದು ಹೇಳಲು ನಾನು ಸಿದ್ಧನಿಲ್ಲ. ನಾವು ವಿಚಾರಗಳನ್ನು ಒಪ್ಪಿಕೊಳ್ಳಲೇಬೆಕು. ಬೆಳ್ಳಿ ಪರದೆಯನ್ನು ಖಾನ್​ಗಳು ಮತ್ತು ಸೂಪರ್​ಸ್ಟಾರ್​ಗಳು ಆವರಿಸಿಕೊಂಡಿದ್ದಾರೆ. ನಾವಿನ್ನೂ ಸಾಕಷ್ಟು ಸಮಯ ಕಾಯಬೇಕಿದೆ. ಮಹಿಳಾ ಪ್ರಧಾನ ಸಿನಿಮಾಗಳು ಒಟಿಟಿಯಲ್ಲಿ ಸೂಪರ್ ಹಿಟ್ ಆಗುತ್ತಿವೆ.

ಡಿಂಪಲ್ ಕಪಾಡಿಯಾ ಅವರು ವಿವಿಧ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಮಹಿಳೆಯರಿಗೆ ಅನ್ವೇಷಿಸಲು ಒಟಿಟಿ ಪ್ಲಾಟ್​ಫಾರ್ಮ್ ಇದೆ. ಡಾರ್ಲಿಂಗ್ಸ್, ಸಿಟಿ ಆಫ್ ಡ್ರೀಮ್ಸ್, ಡಬ್ಬಾ ಕಾರ್ಟೆಲ್ ರೀತಿಯ ಪ್ರಾಜೆಕ್ಟ್​ಗಳು ಬರುತ್ತಿವೆ. ದೂರುತ್ತಾ ಕೂರುವ ಬದಲು ಸಮದೂಗಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಹುಡುಕಬೇಕಿದೆ ಎಂದು ನಟಿ ಖುಷ್ಬೂ ಸುಂದರ್ ಅಭಿಪ್ರಾಯಪಟ್ಟಿದ್ದಾರೆ.