ಬೆಂಗಳೂರು: ಟೀಮ್ ಕುಂದಾಪುರಿಯನ್ಸ್ ಪ್ರಸ್ತುತಪಡಿಸುವ ಕುಂದಾಪ್ರ ಕನ್ನಡ ಉತ್ಸವ 2025 ಇದೇ ಜುಲೈ 20ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ.
ಪ್ರತಿ ವರ್ಷದಂತೆ ಈ ವರ್ಷವು ಹಲವು ವಿಶೇಷತೆಗಳಿಂದ ಕೂಡಿರುವ ಉತ್ಸವವನ್ನು ಅದ್ದೂರಿಯಾಗಿ ಬಸವೇಶ್ವರ ನಗರದ ನೇತಾಜಿ ಮೈದಾನದಲ್ಲಿ ಜುಲೈ 20ರ ಭಾನುವಾರ(ನಾಳೆ) ಆಚರಿಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6.30 ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಯಕ್ಷಗಾನ, ಕುಂದಾಪುರ ಸಾಂಸ್ಕೃತಿಕ ವೈಭವ, ಸ್ವಾಮಿಕೋಲ, ಕಂಬಳ ಒಳಲ್, ಕುಂದಾಪುರದ ಗ್ರಾಮೀಣ ಕ್ರೀಡಾಕೂಟ, ಅಹಾರ ಮೇಳ ಸೇರಿ ಹಲವು ಕಾರ್ಯಕ್ರಮ ಇರಲಿದೆ.
ವೇಗವಾಗಿ ಓಡುವ ಸಿಲಿಕಾನ್ ಸಿಟಿ ಬೆಂಗಳೂರಿನ ಬದುಕಿನ ಒತ್ತಡದಲ್ಲಿ ಭಾಷೆ-ಸಂಸ್ಕ್ರತಿ ಹಿಂದೆ ಉಳಿದುಬಿಟ್ಟಿದ್ಯೋ ಎನ್ನುವ ಭಾವ ಸಹಜ. ಹೀಗೆ ಆದಾಗೆಲ್ಲ ಮತ್ತೆ ಕೂಡಿಸಿ ಗುಣಿಸಿ ಬದುಕು-ಭಾಷೆಯನ್ನು ಸಂಭ್ರಮಿಸೋದು ಇಂದಿನ ತುರ್ತಾಗಿದೆ. ಇದರ ಭಾಗವಾಗಿಯೇ ಕುಂದಾಪ್ರ ಕನ್ನಡ ಉತ್ಸವ ಆಯೋಜನೆಗೊಂಡಿದೆ. ಕೊಲ್ಲೂರು ಮೂಕಾಂಬಿಕೆಯ ಟ್ಯಾಬ್ಲೋ ಮೆರವಣಿಗೆ, ಯಕ್ಷಗಾನ ವೈಭವ, ಕುಂದಾಪುರದ ಜಾನಪದ ನೃತ್ಯ, ಮಕ್ಕಳ ವಿಭಿನ್ನ ಕಾರ್ಯಕ್ರಮ, ಕುಂದಾಪ್ರದ ಆಟೋಟ ಸ್ಪರ್ಧೆಗಳು ಸೇರಿ ಹತ್ತು ಹಲವು ಕಾರ್ಯಕ್ರಮಗಳು ಇರಲಿದೆ.