ನ್ಯೂಸ್

ಸೈಫ್​ ಮೇಲಿನ ದಾಳಿ ಕುರಿತು ಕೊನೆಗೂ ಮೌನ ಮುರಿದ ಸೋಹಾ ಪತಿ; ಕುನಾಲ್​​​ ಹೇಳಿದ್ದೇನು? | Kunal Kemmu

ಮುಂಬೈ: ಬಾಲಿವುಡ್​ ನಟ ಸೈಫ್​ ಅಲಿ ಖಾನ್ ಮೇಲೆ ಜನವರಿ 16ರಂದು ಬಾಂದ್ರಾದಲ್ಲಿರುವ ಅವರ ಮನೆಯಲ್ಲಿಯೇ ಚಾಕುವಿನಿಂದ ದಾಳಿ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಸತತ 5 ದಿನಗಳ ಬಳಿಕ ಅವರನ್ನು ಡಿಶ್ಚಾರ್ಜ್​ ಮಾಡಿದ್ದು ಗೊತ್ತೆ ಇದೆ. ಘಟನೆ ನಡೆದು ಈಗ ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಪ್ರಸ್ತುತ ಸೈಫ್​​ ಅಲಿ ಖಾನ್​​​ ಆರೋಗ್ಯವಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಚಿಕ್ಕಮ್ಮನ ಮಗ ಆದರ್ ಜೈನ್ ಅವರ ಮದುವೆಯಲ್ಲಿ ಪತ್ನಿ ಕರೀನಾ ಕಪೂರ್ ಅವರೊಂದಿಗೆ ಭಾಗವಹಿಸಿದ್ದರು. ಸೈಫ್ ಅವರ ಸಹೋದರಿ ಸೋಹಾ ಅಲಿ ಖಾನ್ ಅವರ ಪತಿ ಮತ್ತು ನಟ ಕುನಾಲ್ ಕೇಮು(Kunal Kemmu) ಈ ದಾಳಿಗೆ ಸಂಬಂಧಿಸಿದಂತೆ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಆ ದಿನ ಏನಾಯಿತು ಮತ್ತು ಅದರ ಬಗ್ಗೆ ತನಗೆ ಯಾವಾಗ ತಿಳಿಯಿತು ಎಂಬುದನ್ನು ಕುನಾಲ್​ ಖೇಮು ಬಹಿರಂಗಪಡಿಸಿದ್ದಾರೆ. ಕುನಾಲ್ ಈ ಬಗ್ಗೆ ಸೈಫ್ ಸಹೋದರಿ ಸೋಹಾ ಅಲಿ ಖಾನ್ ಅವರಿಗೆ ಹೇಗೆ ಮಾಹಿತಿ ನೀಡಿದರು ಎಂಬುದನ್ನು ತಿಳಿಸಿದ್ದಾರೆ. ಮೊದಲನೆಯದಾಗಿ ಸೈಫ್ ಆರೋಗ್ಯವಾಗಿದ್ದಾರೆಯೇ ಎಂಬುದು ಮುಖ್ಯವಾಗಿತ್ತು. ನಂತರ ಅವರು ಅಪಾಯದಿಂದ ಪಾರಾಗಿದ್ದಾರೆಂದು ನಮಗೆ ತಿಳಿದಾಗ ಬೇರೇನೂ ಮುಖ್ಯವಾಗಲಿಲ್ಲ. ನನಗೆ ಬೆಳಿಗ್ಗೆ 6 ಗಂಟೆಗೆ ಕರೆ ಬಂತು ಸೈಫ್​​ ಅಲಿ ಖಾನ್​ ಅವರ ಮೇಲೆ ದಾಳಿ ನಡೆದ ಕುರಿತು ಮಾಹಿತು ಸಿಕ್ಕಿತು ಎಂದು ಹೇಳಿದರು. ಭಯ ಹೇಗೆ ಕೆಲಸ ಮಾಡುತ್ತದೆ ಎಂಬುದು ವಿಚಿತ್ರ. ನಾನು ಇದನ್ನು ಸೋಹಾಗೆ ಹೇಳಲೇಬೇಕಿತ್ತು. ಈ ಸಮಯದಲ್ಲಿ ನಾವು ನಮ್ಮ ಮಗಳನ್ನು ಶಾಲೆಗೆ ಕಳುಹಿಸಲು ತಯಾರಿ ನಡೆಸುತ್ತಿದ್ದೆವು ಎಂದು ಅವರು ತಿಳಿಸಿದರು.

ಇದಲ್ಲದೆ ಆ ಸಮಯದಲ್ಲಿ ಸೈಫ್​ ಮೇಲೆ ದಾಳಿಯಾಗಿದೆ ಎಂಬ ಮಾಹಿತಿಯನ್ನು ಮಾತ್ರ ನೀಡಲಾಗಿತ್ತು ಮತ್ತು ಬೇರೇನೂ ನೀಡಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಸೋಹಾಗೆ ಏನನ್ನು ಮತ್ತು ಹೇಗೆ ಹೇಳುವುದು ಎಂದು ನನಗೆ ಅರ್ಥವಾಗಲಿಲ್ಲ. ಆಗ ನಾನು ನನ್ನ ಮಗಳನ್ನು ಈಗ ಶಾಲೆಗೆ ಕಳುಹಿಸಬೇಕೇ ಅಥವಾ ಬೇಡವೇ ಎಂದು ಯೋಚಿಸಿದೆ. ಈ ಎಲ್ಲಾ ವಿಷಯಗಳು ನನ್ನ ಮನಸ್ಸಿನಲ್ಲಿ ಸುತ್ತುತ್ತಿದ್ದವು. ಆದರೆ ನಂತರ ನಾವು ನನ್ನ ಮಗಳು ಇನಾಯಾಳನ್ನು ಶಾಲೆಗೆ ಕಳುಹಿಸಿದೆವು ಮತ್ತು ಸೋಹಾಳಿಗೆ ಆಸ್ಪತ್ರೆಗೆ ಹೋಗಬೇಕೆಂದು ಹೇಳಿದೆ. ನಂತರ ನಿಧಾನವಾಗಿ ನಮಗೆ ಏನಾಯಿತು ಎಂದು ತಿಳಿಯಿತು ಎಂದಿದ್ದಾರೆ.

ಅಪರಿಚಿತನೊಬ್ಬ ನಟನ ಮನೆಗೆ ನುಗ್ಗಿ ಸೈಫ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಆರು ಬಾರಿ ಇರಿದಿದ್ದಾನೆ. ಈ ದಾಳಿಗಳಲ್ಲಿ ಒಂದು ಅವರ ಬೆನ್ನುಹುರಿಯ ಬಳಿ ನಡೆದಿದೆ, ಇದು ಅತ್ಯಂತ ಅಪಾಯಕಾರಿಯಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಸೈಫ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅವರ ಜೀವವನ್ನು ಉಳಿಸಲಾಯಿತು.(ಏಜೆನ್ಸೀಸ್​​)