ನ್ಯೂಸ್

ಪಕ್ಷದ ಮಾನ ಉಳಿಸಲು ಅನಿತಾ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೆ; ಭವಾನಿ ರೇವಣ್ಣ ಸ್ಪರ್ಧಿಸಬೇಕಾದ ಅನಿವಾರ್ಯತೆ ಇಲ್ಲ!

ರಾಯಚೂರು: ಇತ್ತೀಚೆಗೆ ಜಿ.ಪಂ.ಮಾಜಿ ಸದಸ್ಯೆ ಭವಾನಿ ರೇವಣ್ಣ ಮಾತನಾಡುತ್ತಾ, ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಇದು ರಾಜ್ಯರಾಜಕಾರಣದಲ್ಲಿ ಹಾಗೂ ಜೆಡಿಎಸ್ ಪಾಳಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಜೆಡಿಎಸ್‌ನಿಂದ ನನ್ನನ್ನು ಹಾಸನದ ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಒಮ್ಮತದಿಂದ ನಿರ್ಣಯ ತೆಗೆದುಕೊಂಡಿದ್ದಾರೆ. ಸ್ಪಲ್ಪ ದಿನಗಳಲ್ಲೇ ನನ್ನ ಹೆಸರು ಘೋಷಣೆಯಾಗಲಿದೆ ಎಂದಿದ್ದರು. ಇದೀಗ ಈ ವಿಚಾರವಾಗಿ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಭವಾನಿ ರೇವಣ್ಣ ಅಭ್ಯರ್ಥಿಯಾಗುವ ಅನಿವಾರ್ಯತೆ ಇಲ್ಲ. ಒಂದು ವೇಳೆ ಅನಿವಾರ್ಯತೆ ಇದ್ದಿದ್ದೇ ಆದಲ್ಲಿ ನಾವೇ ಅಭ್ಯರ್ಥಿಯನ್ನಾಗಿ ಮಾಡುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ.

ಅಂದು ಪಕ್ಷದ ಮಾನ ಉಳಿಸಲು ನಾನು ಅನಿತಾ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೆ. ನಾಡಿನ ಜನತೆಗೆ ನಾನು ಮನವಿ ಮಾಡುತ್ತಿದ್ದೇನೆ, ನಮ್ಮ ಪಕ್ಷದಿಂದ ಹಾಸನದಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಯಾವುದೇ ಗೊಂದಲಕ್ಕೆ ಆಸ್ಪದ ಕೊಡಬೇಡಿ. ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಕುಟುಂಬ ರಾಜಕೀಯ ಇಲ್ಲ. ಚುನಾವಣೆಗೆ ನಿಲ್ಲುವ ಆಸೆ ಎಲ್ಲರಿಗೂ ಇರುವುದು ಸಹಜ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.