ನ್ಯೂಸ್

ಹೆಣದ ಮೇಲೆ ರಾಜಕೀಯ ಮಾಡುವುದೇ ಕುಮಾರಸ್ವಾಮಿ, ಬಿಜೆಪಿ ನಾಯಕರ ವೃತ್ತಿ : DK ಶಿವಕುಮಾರ್​

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ವಿಚಾರದಲ್ಲಿ ನಾನು ರಾಜ್ಯದ ಜನತೆಗೆ ಉತ್ತರ ನೀಡಬೇಕೇ ಹೊರತು, ಬಿಜೆಪಿಯವರ ಹೇಳಿಕೆಗೆ ಉತ್ತರಿಸುವ ಅಗತ್ಯವಿಲ್ಲ. ಅವರ ಹೇಳಿಕೆಗಳು ಅಸಂಬದ್ಧ, ರಾಜಕೀಯ ಮಾಡುವುದರಲ್ಲಿ ಅವರು ಮಾಸ್ಟರ್ ಮೈಂಡ್​​ಗಳು ಎಂದು DK ಶಿವಕುಮಾರ್​​ ಟೀಕಿಸಿದರು.

ಸದಾಶಿವನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದರು. ಕುಮಾರಸ್ವಾಮಿ ಹಾಗೂ ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಇದೇ ಅವರ ವೃತ್ತಿ. ಅವರ ಆಡಳಿತ ಅವಧಿಯಲ್ಲಿ ಏನೆಲ್ಲಾ ಆಗಿದೆ ಎಂದು ಪಟ್ಟಿ ನೀಡಬಹುದು. ಆದರೆ ಅವರ ಮಟ್ಟಕ್ಕೆ ಇಳಿದು ರಾಜಕಾರಣ ಮಾಡಲು ನನಗೆ ಇಚ್ಛೆ ಇಲ್ಲ. ಆದರೆ ಬಾಳಿ ಬದುಕಬೇಕಾಗಿದ್ದ 14-15 ವರ್ಷದ ಮಕ್ಕಳು ಸತ್ತಿರುವುದನ್ನು ಕಣ್ಣಾರೆ ನೋಡಿದ್ದೇನೆ. ಇದನ್ನು ಯಾವುದೇ ಕುಟುಂಬ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಪೊಲೀಸ್ ಆಯುಕ್ತರು ಈ ಕಾರ್ಯಕ್ರಮವನ್ನು 10 ನಿಮಿಷಗಳಲ್ಲಿ ಮುಗಿಸಿ ಎಂದು ಹೇಳಿದರು. ನಾನು ಕೂಡ ಆರ್​​ಸಿಬಿ ತಂಡದ ಜೊತೆ ಮಾತನಾಡಿ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು ಎಂದರು.

ನಾವು ಪಾಠ ಕಲಿಯಬೇಕಿದೆ

ಬದುಕಿ ಬಾಳಬೇಕಿದ್ದ ನಮ್ಮ ಮನೆಯ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ದುರ್ಘಟನೆಯಿಂದ ಜೀವಹಾನಿಯಾಗಿದೆ. ಬೆಂಗಳೂರು ಹಾಗೂ ಕರ್ನಾಟಕ ರಾಜ್ಯದ ಘನತೆಗೆ ಧಕ್ಕೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಿ ಲೋಪದೋಷ ಸರಿಪಡಿಸಲಾಗುವುದು. ಇದರಿಂದ ನಾವು ಪಾಠವನ್ನು ಕಲಿಯಬೇಕಿದೆ” ಎಂದು ಅವರು ಭಾವುಕರಾದರು.