ಬರ್ಲಿನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ನ ತೀವ್ರ ರಾಜಕೀಯ ವಿರೋಧಿಯಾಗಿದ್ದ ಅಲೆಕ್ಸಿ ನವಾಲ್ನಿಗೆ ವಿಷ ನೀಡಿ ಹತ್ಯೆಗೆ ಯತ್ನಿಸಲಾಗಿದೆ ಎಂಬುದು ಕೊನೆಗೂ ಖಚಿತವಾಗಿದೆ. ಜತೆಗೆ, ಸರ್ಕಾರದೊಂದಿಗೆ ಆಪ್ತವಾಗಿ ಗುರುತಿಸಿಕೊಂಡವರೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಅಲೆಕ್ಸಿ ನವಾಲ್ನಿಗೆ 'ನೋವಿಚೋಕ್ ' ಎಂದು ಕರೆಯಲಾಗುವ ವಿಷವನ್ನು ನೀಡಿ ಹತ್ಯೆಗೆ ಯತ್ನಿಸಲಾಗಿದೆ. ಸದ್ಯ ಜರ್ಮನಿಯ ಬರ್ಲಿನ್ ಪ್ರಖ್ಯಾತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಲೆಕ್ಸಿ ತೀವ್ರ ಕೋಮಾಗೆ ಜಾರಿದ್ದಾರೆ. ಎರಡು ವರ್ಷಗಳ ಹಿಂದೆ ಬ್ರಿಟನ್ನಲ್ಲಿ ರಷ್ಯಾದ ಬೇಹುಗಾರನಾಗಿದ್ದ ಸರ್ಗೆಯ್ ಸ್ಕ್ರಿಪಾಲ್ ಎಂಬುವರ ಹತ್ಯೆಗೆ ಬಳಸಿದ್ದ ರಾಸಾಯನಿಕದೊಂದಿಗೆ ಈ ವಿಷ ಸಾಮ್ಯತೆ ಹೊಂದಿದೆ ಎಂದು ಹೇಳಲಾಗಿದೆ.
ಪುಟಿನ್ ಹಾಗೂ ರಷ್ಯಾ ಸರ್ಕಾರದ ಕಡು ಟೀಕಾಕಾರರಲ್ಲಿ ಒಬ್ಬರೆಂದು ಅಲೆಕ್ಸಿ ಗುರುತಿಸಿಕೊಂಡಿದ್ದರು. ಕಳೆದ ತಿಂಗಳು ಸರ್ಬಿಯಾಗೆ ತೆರಳಲು ವಿಮಾನದಲ್ಲಿದ್ದಾಗ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಬರ್ಲಿನ್ಗೆ ಕರೆತರಲಾಗಿತ್ತು. ಆದರೆ, ಅಲೆಕ್ಸಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವುದಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂದು ರಷ್ಯಾ ಸರ್ಕಾರ ಸ್ಪಷ್ಟಪಡಿಸಿದೆ. ಜತೆಗೆ ಸ್ಕ್ರಿಪಾಲ್ ಹತ್ಯೆಯಲ್ಲೂ ಯಾವುದೇ ಪಾತ್ರವಿರಲಿಲ್ಲ ಎಂದೂ ಕೂಡ ಹೇಳುತ್ತಲೇ ಬಂದಿದೆ. ರಷ್ಯಾದ ಎಜೆಂಟ್ಗಳು ಬ್ರಿಟನ್ಗೆ ಬಂದು ನೋವಿಚೋಕ್ ವಿಷಕಾರಿ ರಾಸಾಯನಿಕದಿಂದ ಹೇಗೆ ಹತ್ಯೆ ನಡೆಸಿದ್ದರು ಎಂಬುದಕ್ಕೆ ಬ್ರಿಟನ್ ಸರ್ಕಾರ ಹಲವು ಸಾಕ್ಷ್ಯಗಳನ್ನು ನೀಡಿದ್ದರೂ ರಷ್ಯಾ ಅದನ್ನು ನಿರಾಕರಿಸುತ್ತಲೇ ಬಂದಿದೆ.
ಇದೀಗ ಅಲೆಕ್ಸಿಗೆ ವಿಷ ನೀಡಿ ಕೊಲ್ಲಲು ಯತ್ನಿಸಲಾಗಿದೆ ಎಂಬುದು ರಷ್ಯಾದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಇದು ಪಾಶ್ಚಾತ್ಯ ರಾಷ್ಟ್ರಗಳೊಂದಿಗಿನ ರಷ್ಯಾದ ಬಾಂಧವ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದೇ ವಿಶ್ಲೇಷಿಸಲಾಗಿದೆ.
ಏನಿದು 'ನೋವಿಚೋಕ್ ನರ್ವ್ ಎಜೆಂಟ್'?: ನೋವಿಚೋಕ್ ಎಂದರೆ ರಷ್ಯನ್ ಭಾಷೆಯಲ್ಲಿ ಹೊಸಬ ಎಂದರ್ಥ. ಇದು ಹಲವು ವಿಷಯುಕ್ತ ರಾಸಾಯನಿಕ ವಸ್ತುಗಳ ಮಿಶ್ರಣವಾಗಿದೆ ಹಾಗೂ ಅತ್ಯಂತ ಮಾರಣಾಂತಿಕವಾಗಿದೆ. 1970ರ ನಂತರದ ಶೀತಲ ಸಮರದ ವೇಳೆ ರಷ್ಯಾದ ಶತ್ರುಗಳನ್ನು ಕೊಲ್ಲಲೆಂದೇ ಇದನ್ನು ತಯಾರಿಸಲಾಗುತ್ತಿತ್ತು. ದೇಹಕ್ಕೆ ಸೇರಿದ ಕಲವೇ ನಿಮಿಷಗಳಲ್ಲಿ ಇದು ಅತ್ಯಂತ ಘಾತಕವಾಗಿ ಪರಿಣಮಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇನ್ನೊಂದು ಮುಖ್ಯ ಅಂಶವೆಂದರೆ, ಈ ವಿಷ ದೇಹಕ್ಕೆ ಸೇರಿದರೆ ವ್ಯಕ್ತಿ ಸಾಮಾನ್ಯ ಜೀವನ ನಡೆಸುವುದು ಸಾಧ್ಯವೇ ಇಲ್ಲ ಎನ್ನಲಾಗಿದೆ. ಅಷ್ಟರಮಟ್ಟಿಗೆ ಇದು ನರ ಹಾಗೂ ಸ್ನಾಯುಗಳ ಮೇಲೆ ಪರಿಣಾಮ ಬೀರಿರುತ್ತದೆ. ಪಾರ್ಶ್ವವಾಯು, ಯಕೃತ್ತು ಹಾನಿ, ಅಪಸ್ಮಾರಕ್ಕೆ ತುತ್ತಾಗುತ್ತಾರೆ ಎಂದು ಹೇಳಲಾಗಿದೆ.