ನ್ಯೂಸ್

ಕೊನೆಗೂ ಪರೀಕ್ಷೆ ಮುಂದೂಡಿದ ಕೆಪಿಎಸ್‌ಸಿ

Bellari - Heera Nayak

ಬೆಂಗಳೂರು: ಅಭ್ಯರ್ಥಿಗಳ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಕೊನೆಗೂ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ನಡೆಸುವ ಕೆಎಎಸ್ ಮುಖ್ಯ ಪರೀಕ್ಷೆ ದಿನಾಂಕವನ್ನು ಮುಂದೂಡಿದೆ.

ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಫೆಬ್ರವರಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ಹಿಂದೆ ಜನವರಿಯಲ್ಲಿ ಪರೀಕ್ಷೆ ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಿತ್ತು.

2020ರ ಜನವರಿ 8ರಿಂದ ಐಎಎಸ್ ಮುಖ್ಯ ಪರೀಕ್ಷೆ ನಡೆಸಲು ಕಳೆದ ಆರು ತಿಂಗಳ ಹಿಂದೆ ಯುಪಿಎಸ್‌ಸಿ ದಿನಾಂಕ ನಿಗದಿ ಮಾಡಿತ್ತು. ಈ ಅಂಶ ಗಮನದಲ್ಲಿದ್ದರೂ ಜನವರಿ 4ರಿಂದ ಕೆಎಎಸ್ ಮುಖ್ಯ ಪರೀಕ್ಷೆಗೆ ಕೆಪಿಎಸ್‌ಸಿ ದಿನಾಂಕ ನಿಗದಿ ಮಾಡಿತ್ತು. ಪರಿಣಾಮ ರಾಜ್ಯದಿಂದ ಐಎಎಸ್ ಮತ್ತು ಕೆಎಎಸ್ ಮುಖ್ಯ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ರಾಜ್ಯದ ಸಾವಿರಾರೂ ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮಧ್ಯೆ ಪ್ರವೇಶ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪರೀಕ್ಷೆ ಮುಂದೂಡುವಂತೆ ಕೆಪಿಎಸ್​ಸಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆಯೋಗವು ಪರೀಕ್ಷೆ ಮುಂದೂಡಿ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ರತಿ ಅವಧಿಯಲ್ಲಿ ಕನಿಷ್ಠ ಎರಡು ತಿಂಗಳ ಕಾಲ ಅಂತರದಲ್ಲಿ ಐಎಎಸ್ ಮತ್ತು ಕೆಎಎಸ್ ಮುಖ್ಯ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ, ಪ್ರಸಕ್ತ ಅವಧಿಯಲ್ಲಿ ಮಾತ್ರ ಒಂದೇ ತಿಂಗಳಲ್ಲಿ ನಿಗದಿಯಾಗಿತ್ತು. ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳು(ಮುಖ್ಯಪರೀಕ್ಷೆ) ಫೆ.13ರಿಂದ 16ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ http://www.kpsc.kar.nic.in/ ನೋಡಬಹುದು.