ನ್ಯೂಸ್

ಕೇರಳದ ಹುತಾತ್ಮ ಕಾರ್ಯಕರ್ತರ ಹೆಸರಿನ ಸಾಂಸ್ಕೃತಿಕ ಕೇಂದ್ರಕ್ಕೆ ಕೆಪಿಸಿಸಿಯಿಂದ 25 ಲಕ್ಷ ರೂ. ಧನಸಹಾಯ: DK ಶಿವಕುಮಾರ್​ ಘೋಷಣೆ

ಕಾಸರಗೋಡು (ಕೇರಳ): ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಯೋಜಿತವಾಗಿ ನಡೆಸಿದ ಹೇಯ ಕೃತ್ಯ. ನಮ್ಮ ಭಾರತದ ಪ್ರಜಾಪ್ರಭುತ್ವ ಸಂಸ್ಕೃತಿಗೆ ಮಾಡಿದ ಅಪಮಾನ. ಕೇರಳದ ಕಮ್ಯುನಿಸ್ಟ್ ಪಕ್ಷದಿಂದ ಈ ರೀತಿಯ ಕೃತ್ಯವನ್ನು ನಿರೀಕ್ಷೆ ಮಾಡಿರಲಿಲ್ಲ. ಹುತಾತ್ಮ ಯುವ ಕಾರ್ಯಕರ್ತರ ಹೆಸರಿನಲ್ಲಿ ಸ್ಥಾಪಿಸಲಾಗುವ ಸಾಂಸ್ಕೃತಿಕ ಕೇಂದ್ರಕ್ಕೆ ಕೆಪಿಸಿಸಿ ವತಿಯಿಂದ 25 ಲಕ್ಷ ರೂ. ಧನಸಹಾಯ ನೀಡಲಾಗುವುದು ಎಂದು ಡಿಸಿಎಂ DK ಶಿವಕುಮಾರ್ ಘೋಷಿಸಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ಸೋಮವಾರ ನಡೆದ 6ನೇ ಹುತಾತ್ಮರ ದಿನಾಚರಣೆ ಹಾಗೂ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯುವ ಕಾಂಗ್ರೆಸ್ಸಿನ ನಾಯಕರಾದ ಶರತ್ ಲಾಲ್, ಕೃಪೇಶ್ ಅವರು ಪಕ್ಷಕ್ಕಾಗಿ ತಮ್ಮ ಜೀವವನ್ನೇ ಕೊಟ್ಟಿದ್ದಾರೆ. ಅವರು ನಮ್ಮ ನಡುವೆ ಜೀವಂತವಾಗಿ ಇಲ್ಲದೇ ಇರಬಹುದು ಆದರೆ ಅವರ ಆಲೋಚನೆ, ಚಿಂತನೆಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ, ಹುತಾತ್ಮರಾಗಿದ್ದಾರೆ ಎಂದು ಹೇಳಿದರು.

ನಾನು ಈ ಇಬ್ಬರು ಗೆಳೆಯರ ಸಾವಿನಿಂದ ಅವರ ಕುಟುಂಬಕ್ಕೆ, ಗೆಳೆಯರಿಗೆ, ಪಕ್ಷಕ್ಕೆ ಆಗಿರುವ ನಷ್ಟದ ಅರಿವಿದೆ. ನಾನು ನಮ್ಮ ಎಲ್ಲಾ ನಾಯಕರ ಪರವಾಗಿ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರ, ನಾಯಕರ ಜೊತೆ ಸದಾ ಜೊತೆಯಲ್ಲಿ ಇರುತ್ತೇವೆ ಎಂದು ಸಂದೇಶ ನೀಡಲು ಬಂದಿದ್ದೇನೆ ಎಂದರು.