ಶ್ರೀಕಾಂತ್ ಶೇಷಾದ್ರಿ ಬೆಳಗಾವಿ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ. ಅನಾರೋಗ್ಯ ಕಾರಣಕ್ಕೆ ಅವರು ಚುನಾವಣಾ ರಾಜಕಾರಣದಿಂದ ದೂರ ಉಳಿಯುವ ಸಾಧ್ಯತೆ ದಟ್ಟವಾಗಿದೆ.
ಈ ನಡುವೆ ಅವರನ್ನು ಜನಪ್ರತಿನಿಧಿಯಾಗಿ ಇರುವಂತೆ ನೋಡಿಕೊಳ್ಳಲು ಪಕ್ಷ ಬಯಸಿದೆ ಎಂಬ ಮಾಹಿತಿ ಇದೆ. ಅಂದರೆ, ರಾಜ್ಯಸಭಾ ಸದಸ್ಯೆಯಾಗಿ ಆರಿಸಿ ಕಳಿಸಲು ಚಿಂತನೆ ನಡೆದಿದೆ. ಮುಂದುವರಿದು, ಅವರನ್ನು ಕರ್ನಾಟಕದಿಂದಲೇ ಆರಿಸಿ ಕಳಿಸಬೇಕೆಂಬ ಬಯಕೆಯೂ ಕರ್ನಾಟ ಪ್ರದೇಶ ಕಾಂಗ್ರೆಸ್ ಸಮಿತಿಯದ್ದಾಗಿದೆ.
ಪ್ರಸ್ತುತ ರಾಯ್ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯನ್ನು ಒಂದೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ನ ಭದ್ರಕೋಟೆಯೂ ಆಗಿರುವ ರಾಯ್ಬರೇಲಿಯಲ್ಲಿ 2024ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರತಿನಿಧಿಸಬೇಕೆಂಬ ಅಪೇಕ್ಷೆ ಪಕ್ಷದಲ್ಲಿದೆ. ಈ ಬಗ್ಗೆ ಚರ್ಚೆಯೂ ನಡೆದಿದೆ. 76ರ ಹರೆಯದ ಸೋನಿಯಾ ಗಾಂಧಿ ಪಕ್ಷದ ಚಟುವಟಿಕೆ ಜತೆಗೆ ಜನಪ್ರತಿನಿಧಿಯಾಗಿದ್ದು ಸಕ್ರಿಯ ರಾಜಕಾರಣದಲ್ಲಿದ್ದರೆ ಮಹತ್ವ ಇರಲಿದೆ ಎಂಬ ಪಕ್ಷದಲ್ಲಿ ಅಭಿಪ್ರಾಯವಿದೆ.
ಕರ್ನಾಟಕದಿಂದ ಪ್ರಯತ್ನ: 2024ರ ಏಪ್ರಿಲ್ 2ರಂದು ರಾಜ್ಯಸಭೆಯ ನಾಲ್ಕು ಸ್ಥಾನದ ಅವಧಿ ಮುಕ್ತಾಯವಾಗುತ್ತಿದೆ. ಸೈಯದ್ ನಸೀರ್ ಅಹ್ಮದ್, ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ರಾಜೀವ್ ಚಂದ್ರಶೇಖರ್ ಅವಧಿ ಅಂತ್ಯಗೊಳ್ಳಲಿದೆ. ಸಹಜವಾಗಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಸುಲಭವಾಗಿ ಉಳಿಸಿಕೊಳ್ಳಬಹುದು. ಈ ಅವಕಾಶ ಬಳಸಿಕೊಂಡು ಸೋನಿಯಾರನ್ನು ಆರಿಸಿ ಕಳಿಸಲು ಕೆಪಿಸಿಸಿ ಆಸಕ್ತಿ ತೋರಿಸಿದೆ. ಈ ಪ್ರಸ್ತಾವನೆಯನ್ನು ಹೈಕಮಾಂಡ್ ಮುಂದೆ ಮಂಡಿಸಲು ಪ್ರಾಥಮಿಕ ಹಂತದ ಚರ್ಚೆಗಳು ನಡೆದಿವೆ. ಶೀಘ್ರವೇ ಸೋನಿಯಾ ಹಾಗೂ ರಾಹುಲ್ ಗಾಂಧಿ ಗಮನಕ್ಕೂ ತರಲು ಬಯಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಆಕಾಂಕ್ಷಿಗಳು ಹೆಚ್ಚು: ಪ್ರಸ್ತುತ ಅವಧಿ ಪೂರೈಸುತ್ತಿರುವ ಸದಸ್ಯರು ಪುನಃ ಆಕಾಂಕ್ಷಿಗಳಾಗಿದ್ದಾರೆ. ಆದರೆ ಬಹುತೇಕ ಅವರಿಗೆ ಅವಕಾಶ ಸಿಗುವುದು ಅನುಮಾನ ಎಂಬ ಮಾತು ಪಕ್ಷದಲ್ಲಿದೆ. ಅಲ್ಪಸಂಖ್ಯಾತ, ಒಕ್ಕಲಿಗ, ದಲಿತ ಕೊಟಾವನ್ನು ಪ್ರತಿನಿಧಿಸುವವರಿಗೆ ಅವಕಾಶ ಸಿಗಲಿದೆ. ಈ ನಡುವೆ ಹಿಂದುಳಿದ ವರ್ಗ ಮತ್ತು ಲಿಂಗಾಯತರಿಗೂ ಅವಕಾಶ ಕೊಡಬೇಕೆಂಬ ಬೇಡಿಕೆ ಸಹ ಬಂದಿದೆ. ಮನ್ಸೂರ್ ಅಲಿಖಾನ್, ರಾಜೀವ್ ಗೌಡ, ವಿ.ಆರ್. ಸುದರ್ಶನ್, ರಘು ನಂದನ್ ರಾಮಣ್ಣ ಹೆಸರು ಸದ್ಯ ಚರ್ಚೆಯಲ್ಲಿದೆ.
ರಾಜ್ಯಕ್ಕೆ ಲಾಭ: ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಆರಿಸಿ ಕಳಿಸಿದ್ದು ಇತಿಹಾಸ. ಬಳಿಕ ಸೋನಿಯಾ ಗಾಂಧಿ ಕೂಡ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದರು. ಹೀಗಾಗಿ ಕರ್ನಾಟಕದ ಜತೆಗೆ ನೆಹರು ಕುಟುಂಬದ ನಂಟು ಇದ್ದೇ ಇದೆ. ಇದೀಗ ಸೋನಿಯಾರನ್ನು ರಾಜ್ಯಸಭೆಗೆ ಕಳಿಸಿದರೆ ಕೆಪಿಸಿಸಿಗೂ ಗೌರವ ಹೆಚ್ಚಲಿದೆ, ಪಕ್ಷದ ಹಿಡಿತ ರಾಜ್ಯದಲ್ಲಿ ಬಿಗಿಯಾಗ ಲಿದೆ ಎಂಬುದು ರಾಜ್ಯ ನಾಯಕರ ಅಭಿಪ್ರಾಯ ಇದೆ. 2024ರ ಏ.2ರಂದು ರಾಜ್ಯಸಭೆಯ ನಾಲ್ಕೂ ಸ್ಥಾನದ ಅವಧಿ ಮುಕ್ತಾಯವಾಗಲಿದ್ದು, ಏಪ್ರಿಲ್ ಮೊದಲ ವಾರದಲ್ಲೇ ಚುನಾವಣೆ ಮುಗಿಯಲಿದೆ. ಹೀಗಾಗಿ ಸೋನಿಯಾ ಅವರನ್ನು ಆರಿಸಿ ಕಳಿಸಿದರೆ ಲೋಕಸಭೆ ಚುನಾವಣೆಯಲ್ಲೂ ರಾಜ್ಯದಿಂದ ಪಕ್ಷ ಸ್ಥಾನಗಳನ್ನು ವೃದ್ಧಿಸಿ ಕೊಳ್ಳಲು ಅನುಕೂಲವಾಗಲಿದೆ ಎಂಬ ವಾದವೂ ಇದೆ.