Korean woman : ಒಂದೇ ಒಂದು ಭಾಷೆಯನ್ನು ಕಲಿಯಲು ಕೆಲವರು ಹರಸಾಹಸ ಪಡುವಾಗ ಕೆಲವೊಬ್ಬರು ಐದಾರು ಭಾಷೆಯನ್ನು ನಿರರ್ಗಳವಾಗಿ ಮಾತನಾಡುವುದನ್ನು ನೋಡಿ ನಾವು ಹುಬ್ಬೇರಿಸಿದ್ದುಂಟು. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ನೋಡಿದ್ದೇವೆ. ಈ ಸಾಲಿಗೆ ಮತ್ತೊಂದು ವಿಡಿಯೋ ಇದೀಗ ಸೇರ್ಪಡೆಗೊಂಡಿದೆ.
ಭಾರತೀಯ ವ್ಯಕ್ತಿಯೊಬ್ಬನ ಭಾಷಾ ಕೌಶಲ್ಯವನ್ನು ನೋಡಿದ ಕೊರಿಯನ್ ಯುವತಿ, ಒಂದು ಕ್ಷಣ ಹುಬ್ಬೇರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವ್ಲಾಗರ್ ಆಗಿರುವ ಕೊರಿಯನ್ ಯುವತಿ, ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದರು. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಈ ವಿಶೇಷ ಘಟನೆ ನಡೆದಿದೆ.
ಹಲವಾರು ಜನ ನನ್ನನ್ನೇ ನೋಡುತ್ತಿದ್ದಾರೆ ಎಂದು ಹೇಳುವ ಮೂಲಕ ಕೊರಿಯನ್ ಯುವತಿ ವಿಡಿಯೋವನ್ನು ಪ್ರಾರಂಭಿಸುತ್ತಾಳೆ. ಈ ವೇಳೆ ತನ್ನ ಪಕ್ಕದಲ್ಲಿದ್ದ ಭಾರತೀಯ ಪುರುಷನೊಂದಿಗೆ ಕೊರಿಯನ್ ಭಾಷೆಯಲ್ಲಿ ಆ ಯುವತಿ ಮಾತನಾಡುತ್ತಾಳೆ. ನೀನು ನನ್ನನ್ನೇ ಏಕೆ ಈ ರೀತಿ ನೋಡುತ್ತಿದ್ದೀಯ? ನಾನಂದ್ರೆ ನಿನಗೆ ಇಷ್ಟಾನಾ? ಎಂದು ಯುವತಿ ಕೇಳುತ್ತಾಳೆ. ಆತನಿಗೆ ನನ್ನ ಭಾಷೆ ಅರ್ಥವಾಗುವುದಿಲ್ಲ ಎಂದು ಆ ಮಹಿಳೆ ಅಂದುಕೊಳ್ಳುತ್ತಾಳೆ. ಆದರೆ, ಅಲ್ಲಿ ನಡೆದಿದ್ದೇ ಬೇರೆ.
ಆ ಭಾರತೀಯ ವ್ಯಕ್ತಿ ಮುಗುಳ್ನಗುತ್ತಾ ಕೊರಿಯನ್ ಭಾಷೆಯಲ್ಲಿ "ನಾನು ಇಲ್ಲಿ ಕೆಲಸ ಮಾಡುತ್ತೇನೆ" ಎಂದು ಉತ್ತರಿಸುತ್ತಾನೆ. ಇದನ್ನು ಕೇಳಿದ ಮಹಿಳೆ ಒಂದು ಕ್ಷಣ ಹುಬ್ಬೇರಿಸುತ್ತಾಳೆ. ಮೂಖನ್ನನಾಗಿ ಮಾಡಲು ಹೋಗಿ ತಾನೇ ಮೂರ್ಖಳಾಗುತ್ತಾಳೆ. ಇದಾದ ಬಳಿಕ ಆ ಮಹಿಳೆ "ನೀವು ಕೊರಿಯನ್ ಭಾಷೆಯನ್ನು ಹೇಗೆ ಇಷ್ಟು ವೇಗವಾಗಿ ಮಾತನಾಡುತ್ತೀರಿ? ಎಂದು ಕೇಳುತ್ತಾಳೆ.
ಇದಕ್ಕೆ ಉತ್ತರಿಸಿದ ಭಾರತೀಯ ವ್ಯಕ್ತಿ, ನಾನು ಕೊರಿಯಾದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಿದ್ದೇನೆ. ಆದ್ದರಿಂದ, ನಾನು ಕೊರಿಯನ್ ಭಾಷೆಯನ್ನು ಕಲಿತಿದ್ದೇನೆ ಎಂದು ಉತ್ತರಿಸುತ್ತಾನೆ. ಬಳಿಕ ಆ ಮಹಿಳೆ ಕ್ಷಮೆಯಾಚಿಸಿ ಅಲ್ಲಿಂದ ಹೊರಟುಹೋಗುತ್ತಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇಗನೆ ವೈರಲ್ ಆಗಿದೆ. (ಏಜೆನ್ಸೀಸ್)