ನ್ಯೂಸ್

24 ಗಂಟೆ ಒಳಗೆ ಮುಗಿಸ್ತೇನೆ ಎಂದು ಎಸ್​ಪಿಗೆ ಬೆದರಿಕೆ ಹಾಕಿದ್ದ ಕೊರಂಗು!

ಬೆಂಗಳೂರು: ಇಂದು ಮೃತಪಟ್ಟ ಕುಖ್ಯಾತ ರೌಡಿಶೀಟರ್ ಕೃಷ್ಣಮೂರ್ತಿ ಅಲಿಯಾಸ್​ ಕೊರಂಗು ಕೃಷ್ಣನ ಹಿನ್ನೆಲೆ ಹುಡುಕುತ್ತಾ ಹೋದರೆ ಒಂದಕ್ಕಿಂತ ಒಂದು ಭಯಾನಕ ಘಟನೆಗಳ ಸರಣಿಯೇ ತೆರೆದುಕೊಳ್ಳುತ್ತದೆ.

ಅದು 2011ರ ಡಿಸೆಂಬರ್​ ತಿಂಗಳು. ಅನೇಕ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಈತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಜೈಲಿನಲ್ಲಿ ಪ್ರತಿ ರಾತ್ರಿ 8 ಗಂಟೆಯ ಸುಮಾರು ಪೊಲೀಸ್​ ವರಿಷ್ಠಾಧಿಕಾರಿಗಳು ರೌಂಡ್ಸ್​ ನಡೆಸುತ್ತಾರೆ. ಅದರಂತೆ ಅಂದು ಸಬ್​ ಇನ್ಸ್​ಪೆಕ್ಟರ್​ ಕೃಷ್ಣಕುಮಾರ್ ಅವರು, ರೌಂಡ್ಸ್​ ನಡೆಸುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕೊರಂಗು, ಅವರು ಬರುತ್ತಿದ್ದಂತೆಯೇ ಕೊರಂಗು, ಏನೋ ಎಸ್​ಸಿ, ನನ್ನನ್ನೇ ಅರೆಸ್ಟ್​ ಮಾಡ್ತಿಯಾ? ನಿನ್ನ ಒಂದು ಕೈ ನೋಡ್ಕೋತೀನಿ, ಹೊರಗೆ ಬಾ. 24 ಗಂಟೆ ಒಳಗೆ ಮುಗಿಸಿಬಿಡ್ತೀನಿ ಎಂದು ಹೇಳಿದ್ದ.

ಅವನ ಹುಚ್ಚಾಟ ನೋಡಿ ಅವನನ್ನು ನಿಯಂತ್ರಿಸಲು ಕೃಷ್ಣಕುಮಾರ್​ ಹಾಗೂ ಇತರ ಪೊಲೀಸರು ಮುಂದಾದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈತ ಇರುವ ಕೊಠಡಿಯಲ್ಲಿ ಸುಮಾರು 40 ಮಂದಿ ಕೈದಿಗಳು ಇದ್ದರು. ಅವರು ಕೂಡ ಈತನಿಗೆ ಪ್ರೋತ್ಸಾಹ ನೀಡುತ್ತಾ ಹಲ್ಲೆಗೆ ಮುಂದಾಗಿದ್ದರು ಎಂದು ಪೊಲೀಸರು ನೆನೆಪಿಸಿಕೊಳ್ಳುತ್ತಾರೆ.

ನಂತರ ಜೈಲಿನ ಸಿಬ್ಬಂದಿ ಕೊರಂಗುವಿನಿಂದ ಎಸ್​ಪಿಯವರನ್ನೇ ಬಚಾವು ಮಾಡಬೇಕಾದ ಪ್ರಸಂಗ ಬಂದಿತ್ತು. ಎಲ್ಲರೂ ಸೇರಿ ಹರಸಾಹಸ ಪಟ್ಟು ಕೊರಂಗುವನ್ನು ಕೂಡಿ ಹಾಕಿದ್ದರು. ನಂತರ ಈತನನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಠಾಣೆಯ ಸಿಬ್ಬಂದಿ ಒತ್ತಾಯ ಮಾಡಿದ್ದರೂ ಅದು ಸಾಧ್ಯವಾಗಿರಲಿಲ್ಲ.