ನ್ಯೂಸ್

ನವೆಂಬರ್‌ನಲ್ಲಿ 'ಕೊರಗಜ್ಜ ದರ್ಶನ'; ತೆರೆಗೆ ಬರಲು ಸಿದ್ಧವಾಗಿದೆ ತುಳುನಾಡಿನ ಮತ್ತೊಂದು ದೈವದ ಕಥೆ

ಬೆಂಗಳೂರು: ತುಳುನಾಡಿನ ದೈವಗಳ ಹಿನ್ನೆಲೆಯ 'ಕಾಂತಾರ ಚಾಪ್ಟರ್ 1' ಚಿತ್ರ ಈಗಾಗಲೇ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೇವಲ 11 ದಿನಗಳಲ್ಲಿ 1655 ಕೋಟಿ ರೂ. ಕಲೆಕ್ಷನ್ ಮಾಡಿಕೊಂಡು, ಬಾಕ್ಸಾಫೀಸಿನಲ್ಲಿ ಭರ್ಜರಿ ಓಟ ಮುಂದುವರಿಸಿದೆ. ಈ ಚಿತ್ರದ ಮೂಲಕ ಪಂಜುರ್ಲಿ ಸೇರಿ ಗುಳಿಗ ದೈವಗಳ ಮಹಿಮೆಯನ್ನು ಇಡೀ ಪ್ರಪಂಚ ಕಣ್ಣುಂಬಿಕೊಳ್ಳುತ್ತಿದೆ. ಹೀಗಿರುವಾಗ, ಕನ್ನಡದಲ್ಲಿ ತುಳುನಾಡಿನ ಕಾರ್ಣಿಕ ಪುರುಷ ಕೊರಗಜ್ಜ ದೈವದ ಹಿನ್ನೆಲೆಯಲ್ಲಿ 'ಕರಿಹೈದ.. ? ಕೊರಗಜ್ಜ' ಶೀರ್ಷಿಕೆಯಲ್ಲಿ ಮತ್ತೊಂದು ಸಿನಿಮಾ ರಿಲೀಸ್​ಗೆ ಸಿದ್ಧವಾಗಿದೆ.

ಗೀತೆ ರಚನೆಕಾರ, ನಿರ್ದೇಶಕ ಸುಧೀರ್ ಅತ್ತಾವರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹೆಸರಾಂತ ಬಾಲಿವುಡ್ ನಟ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ನಟಿಯರಾದ ಶ್ರುತಿ, ಭವ್ಯಾ, ಶುಭಾ ಪೂಂಜಾ ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ರಿಲೀಸ್‌ಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದು, ಇತ್ತೀಚೆಗೆ ಫಸ್ಟ್ ಲುಕ್ ಟೀಸರ್ ಹಾಗೂ 3ಡಿ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಯಿತು. ನಿರ್ದೇಶಕ ಸುಧೀರ್ ಅತ್ತಾವರ್, 'ಮೂರು ವರ್ಷಗಳ ಹಿಂದೆ ಆರಂಭವಾದ ಈ ಸಿನಿಮಾ ಇದೀಗ ಅನೇಕ ಅಡೆ-ತಡೆಗಳನ್ನು ದಾಟಿ ಬಿಡುಗಡೆಯ ಹಂತ ತಲುಪಿದೆ. ನನಗೆ ತಿಳಿದ ಹಾಗೆ ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ತ್ರಿಡಿ ಪೋಸ್ಟ‌ ಮಾಡಿರುವುದು.

ಕೊರಗಜ್ಜನ ಜೀವನವನ್ನು ಸರಳವಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಎಲ್ಲ ಕಾಲಘಟಕ್ಕೂ ಸಲ್ಲುವ ಕಥೆ ಇದು. ಈ ಚಿತ್ರದಲ್ಲಿ ದೃಶ್ಯವೈಭವವಿದೆ. ಜನರಿಗೆ ಅನುಭವಕ್ಕೆ ದಕ್ಕುವ ಕಥೆಯಾಗಿದೆ. ಹಾಗಂತ ಇಂತಹದ್ದೇ ನಿರ್ದಿಷ್ಟ ಜಾನ‌ರ್​ಗೆ ಒಳಪಡುವ ಸಿನಿಮಾ ಇದಲ್ಲ. ಈಗಾಗಲೇ ಹಲವರು ಹಿನ್ನೆಲೆ ಸಂಗೀತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭವ್ಯ, ಶ್ರುತಿ ಅವರನ್ನು ಈ ಚಿತ್ರದಲ್ಲಿ ವಿಭಿನ್ನವಾಗಿ ತೋರಿಸಲಾಗಿದೆ - ಸುಧೀರ್ ಅತ್ತಾವರ್, ನಿರ್ದೇಶಕ

28 ಗಂಟೆಗಳ ನಿರಂತರ ಶೂಟಿಂಗ್

'ಕೊರಗಜ್ಜ' ಚಿತ್ರದಲ್ಲಿ ಹಿರಿಯ ನಟಿ ಶ್ರುತಿ, ಕೊರಗಜ್ಜನ ಸಾಕು ತಾಯಿ ಪಾತ್ರದಲ್ಲಿ ನಟಿಸಿದ್ದು, 'ನನ್ನ ವೃತ್ತಿ ಜೀವನದಲ್ಲೇ ಇದು ವಿಭಿನ್ನ ಹಾಗೂ ಸವಾಲಿನ ಸಿನಿಮಾ, ಸತತ 28 ಗಂಟೆಗಳ ಕಾಲ ನಿರಂತರ ಶೂಟಿಂಗ್ ಮಾಡಿರುವುದು ದೊಡ್ಡ ಚಾಲೆಂಜ್, ಅಷ್ಟು ಸಮಯ ಕಲಾವಿದರಾಗಿ ಉತ್ಸಾಹದಲ್ಲಿರುವುದು ಸವಾಲೇ ಸರಿ. ಆದರೆ, ಇಡೀ ಟೀಮ್ ಆ ಉತ್ಸಾಹವನ್ನು ಕಾಯ್ದುಕೊಂಡಿತ್ತು' ಎಂದು ಶೂಟಿಂಗ್ ಅನುಭವ ಹಂಚಿಕೊಂಡರು.

ಕೊರಗಜ್ಜನ ಆಶೀರ್ವಾದದಿಂದ ಸಿನಿಮಾ ಅಂದುಕೊಂಡ ಹಾಗೆ ಬಂದಿದೆ. ಕನ್ನಡ ಸೇರಿ ಆರು ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ. ಆರು ಭಾಷೆಗಳಲ್ಲಿ ಒಟ್ಟು 31 ಹಾಡುಗಳಿದ್ದು, ಗೋಪಿ ಸುಂದರ್‌ ಸಂಗೀತ ಸಂಯೋಜಿಸಿದ್ದಾರೆ. ಇಪ್ಪತ್ತನಾಲ್ಕು ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಕೇರಳ, ಕೊಚ್ಚಿ, ಅತಿರಾಪಲ್ಲಿ, ಗಗನಚುಕ್ಕಿ, ಬೆಳ್ತಂಗಡಿ, ಬೆಂಗಳೂರಿನ ಕಗ್ಗಲೀಪುರ, ಮಂಗಳೂರು, ಸೇರಿ 13 ಸ್ಥಳಗಳಲ್ಲಿ ಶೂಟಿಂಗ್ ನಡೆಸಿದ್ದೇವೆ. ಇದೇ ನವೆಂಬರ್ 28ಕ್ಕೆ ರಿಲೀಸ್‌ಗೆ ನಿರ್ಧರಿಸಿದ್ದೇವೆ' ಎಂದು ಮಾಹಿತಿ ನೀಡಿದರು.