ನ್ಯೂಸ್

ಕಾಳಗ ಮಾಡಿದ ಕೋಳಿಗಳನ್ನು ಅರೆಸ್ಟ್ ಮಾಡಿದ ಪೊಲೀಸರು!

ಕೊಪ್ಪಳ: ಜೂಜಾಟದ ಅಡ್ಡೆಗಳ ಮೇಲೆ ದಾಳಿ ಮಾಡಿದ ಪೊಲೀಸರು, ತಪ್ಪಿತಸ್ಥರನ್ನು ಬಂಧಿಸುವ ಬದಲು ಅಲ್ಲಿದ್ದ ಕೋಳಿಗಳನ್ನು ಬಂಧಿಸಿ ಸೆರೆಮನೆಯಲ್ಲಿ ಕೂಡಿ ಹಾಕಿರುವ ವಿಚಿತ್ರ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಕೊಪ್ಪಳದ ಕಾರಟಗಿ ತಾಲೂಕಿನ ಪನ್ನಾಪುರ ವ್ಯಾಪ್ತಿಯಲ್ಲಿ.

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಕೋಳಿ ಕಾಳಗ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದಾರೆ. ದಾಳಿ ಮಾಡುವ ವೇಳೆ ಯಾವೊಬ್ಬನೂ ಸ್ಥಳದಲ್ಲಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಪೊಲೀಸರು ಅಲ್ಲಿದ್ದ ಎರಡು ಹುಂಜ ಹಾಗೂ ಬೈಕ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೊಪ್ಪಳ ಜೆಲ್ಲೆಯ ಕಾರಟಗಿ ಪೊಲೀಸ್​ ಠಾಣೆಯ ಪುರುಷರ ಬಂದಿಖಾನೆಯಲ್ಲಿ ಎರಡು ಕೋಳಿಗಳನ್ನು ಬಂಧಿಸಿ ಇಡಲಾಗಿದೆ. ಜೂಜುಕೋರರನ್ನು ಬಿಟ್ಟು ಕೋಳಿಗಳನ್ನು ಬಂಧಿಸಿರುವ ಪೊಲೀಸರು ನಡೆಗೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಾಳಿ ವೇಳೆ ಜೂಜಾಡುತ್ತಿದ್ದವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿರುವುದು ವರದಿಯಾಗಿದೆ.