ನ್ಯೂಸ್

ಸವಿ ಸವಿ ನೆನಪು- ಕೋಲ್ಕತಾದಿಂದ ಲಂಡನ್‌ವರೆಗೆ ಬಸ್‌ ಸಂಚಾರ...!

ಕೋಲ್ಕತಾ: ಲಾಕ್‌ಡೌನ್‌ ಸಮಯದಲ್ಲಿ ಹೆಚ್ಚಿನ ಮಂದಿ ಹಿಂದಿನ ಸವಿ ಸವಿ ಘಟನೆಗಳನ್ನು ಮೆಲುಕು ಹಾಕುತ್ತಿದ್ದರೆ, ಇನ್ನು ಹಲವರು ಇತಿಹಾಸದ ಪುಟಗಳನ್ನು ತಿರುವಿ ಹಾಕವಲ್ಲಿ ತಲ್ಲೀನರಾಗಿದ್ದರು.

ಅಂಥದ್ದೇ ಒಂದು ಅಚ್ಚರಿಯ ಘಟನೆ ರೋಹಿತ್‌ ದಾಸ್‌ಗುಪ್ತಾ ಎನ್ನುವವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದೇನೆಂದರೆ 1960ರ ದಶಕದಲ್ಲಿ ಬಳಸುತ್ತಿದ್ದ ಬಸ್‌ ವಿಷಯವದು.

ವಿಮಾನ ಇಲ್ಲದ ವೇಳೆಯಲ್ಲಿ ಕೋಲ್ಕತಾದಿಂದ ಲಂಡನ್‌ ಸಂಚಾರಕ್ಕೆ ಬಸ್‌ ಆರಂಭಿಸಿರುವ ಕುತೂಹಲದ ವಿಷಯವನ್ನು ಅವರು ಷೇರ್‌ ಮಾಡಿದ್ದು, ಅದೀಗ ಭಾರಿ ವೈರಲ್‌ ಆಗಿದೆ.

1968ರಲ್ಲಿದ್ದ ವಿಶ್ವದ ಅತಿ ದೀರ್ಘಾವಧಿ ಪ್ರಯಾಣ ಮಾಡುತ್ತಿದ್ದ ಬಸ್ ಮಾರ್ಗದಲ್ಲಿ ಸಂಚರಿಸಿದ್ದ ಆಲ್ಬರ್ಟ್ ಹೆಸರಿನ ಬಸ್ ಕುರಿತು ಅವರು ವಿಷಯವನ್ನು ಹಂಚಿಕೊಂಡಿದ್ದಾರೆ. ಇದು ಡಬಲ್ ಡೆಕ್ಕರ್ ಬಸ್ ಆಗಿದ್ದು ಭಾರತ ಮತ್ತು ಲಂಡನ್‌ ನಡುವೆ 15 ಟ್ರಿಪ್‌ ಮತ್ತು ಲಂಡನ್ ಮತ್ತು ಸಿಡ್ನಿಯ ನಡುವೆ ನಾಲ್ಕು ಟ್ರಿಪ್‌ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ವಿಮಾನದಲ್ಲಿ ಇದೀಗ ಕೋಲ್ಕತಾ ವಿಮಾನ ನಿಲ್ದಾಣದಿಂದ ಲಂಡನ್‌ ನಿಲ್ದಾಣಕ್ಕೆ ಹೋಗಲು ಸರಿಸುಮಾರು ಹದಿಮೂರುವರೆ ಗಂಟೆ ಹಿಡಿಯುತ್ತದೆ. ಇನ್ನು ಆ ಬಸ್‌ನಲ್ಲಿ ಅದೆಷ್ಟು ದಿನಗಳು ಹಿಡಿದಿದ್ದವೋ ಗೊತ್ತಿಲ್ಲ. ಏಕೆಂದರೆ ಕೋಲ್ಕತಾದಿಂದ ಲಂಡನ್‌ಗೆ ಸುಮಾರು 7,980 ಕಿಲೋ ಮೀಟರ್‌ಗಳು.

ಈ ವಿಶೇಷ ಬಸ್‌ ಬಗ್ಗೆ ಮಾಹಿತಿ ನೀಡಿರುವ ಅವರು, ಈ ರೂಟ್‌ನ ಬಸ್ ಪ್ರಯಾಣ ದರ 85 ಪೌಂಡ್ ಆಗಿತ್ತು. ಈಗಿನ ಮೌಲ್ಯ ತೆಗೆದುಕೊಳ್ಳುವುದಾದರೆ 7,889 ರೂಪಾಯಿ.

ಲಂಡನ್‌ನ ವಿಕ್ಟೋರಿಯಾ ಕೋಚ್ ನಿಲ್ದಾಣದಲ್ಲಿ ಪ್ರಯಾಣಿಕರ ಚಿತ್ರ, ಮೊದಲ ಪ್ರಯಾಣದ ಸಂದರ್ಭದ ಚಿತ್ರ ವೈರಲ್ ಆಗಿದೆ. 21 ವರ್ಷಗಳ ಸೇವೆಗಳ ನಂತರ ಈ ಬಸ್‌ ಅನ್ನು ಸಾರ್ವಜನಿಕ ಸೇವೆಗೆ ಬಳಸಲಿಲ್ಲವಂತೆ. ನಂತರ ಇದನ್ನು ಬ್ರಿಟಿಷ್ ಪ್ರವಾಸಿಯೊಬ್ಬ ಖರೀದಿಸಿ ಮೊಬೈಲ್ ಹೋಮ್‌ ಆಗಿ ಬಳಸಿದನಂತೆ. ಇದರರಲ್ಲಿಯೇ ಈತ ಸೇರಿದಂತೆ 13 ಜನ ಸಿಡ್ನಿಯಿಂದ ಭಾರತದ ಮಾರ್ಗವಾಗಿ ಲಂಡನ್‌ಗೆ 16 ಸಾವಿರ ಕಿಲೋಮೀಟರ್ ಪ್ರಯಾಣಿಸಿದ್ದರು ಎಂಬ ಮಾಹಿತಿ ಇದೆ.