ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಆ ಘಳಿಗೆಯೇ ರೋಮಾಂಚಕ. ನಾಮಕರಣಕ್ಕೆ ಶಾಸನಬದ್ಧ ಮಾನ್ಯತೆ ಕೊಡುವ ವೇಳೆ ಶಾಸನಸಭೆಯಲ್ಲಿ ಘಟಾನುಘಟಿಗಳಿದ್ದರು. ಆ ಕ್ಷಣಕ್ಕೆ ಸಾಕ್ಷಿಯಾದವರ ಪೈಕಿ ಕೆಲವರು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. ಅವರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ವಾಟಾಳ್ ನಾಗರಾಜ್ ಪ್ರಮುಖರು.
ಅಂದಿನ ಚಿತ್ರಣ... ನಾಮಕರಣ ಆದೇಶ ಜಾರಿಗೆ ಬಂದಿದ್ದು 1973ರ ನ. 1ರಂದು. ಆದರೆ, ಶಾಸನಸಭೆಯಲ್ಲಿ ನಿರ್ಣಯವಾಗಿದ್ದು ಅದಕ್ಕೂ ಒಂದು ವರ್ಷದ ಹಿಂದೆ, 1972ರ ಜು 27ರಂದು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲು ವಿಧಾನಸಭೆಯಲ್ಲಿ ನಿರ್ಣಯ ಮಂಡನೆಯಾಗಿತ್ತು. ಚರ್ಚೆಯ ಆರಂಭದಲ್ಲಿ ಗುಬ್ಬಿ ಶಾಸಕ ಗಟ್ಟಿ ಚಂದ್ರಶೇಖರ್ ಮಾತನಾಡಿ, ‘‘ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಿಂದ ಬರೆಯತಕ್ಕಂಥ ಮಹಾಸುದಿನ. ರಾಜ್ಯದ ಭವ್ಯ ಪರಂಪರೆ ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ಚಿನ್ನ, ಮುತ್ತು, ರತ್ನ, ವೈಢೂರ್ಯಗಳನ್ನು ರಸ್ತೆಯಲ್ಲಿ ಹಾಕಿಕೊಂಡು ಮಾರುತ್ತಿದ್ದ ಸಂಪದ್ಭರಿತ ರಾಜ್ಯವಿದು. ಪರಕೀಯರ ದಾಳಿಗೆ ಒಳಪಟ್ಟು ಛಿದ್ರಛಿದ್ರವಾಗಿ ಅನೇಕ ರಾಜ್ಯಗಳಲ್ಲಿ ಅನಾಥರಾಗಿ ಬಹಳ ಕಾಲ ಬದುಕಿ ಈಗ್ಗೆ ಕೆಲವು ವರ್ಷಗಳ ಹಿಂದೆ ಕನ್ನಡದ ಜನತೆಯೆಲ್ಲಾ ಒಂದುಗೂಡಿದರೂ ನಮ್ಮ ಮಾತೆಯ ಹೆಸರನ್ನು ಒಕ್ಕೊರಲಿನಿಂದ ಕೂಗತಕ್ಕಂತಹ ಸುಯೋಗವು ಈಗ ಪ್ರಾಪ್ತವಾಗಿದೆ’ ಎಂದು ವರ್ಣಿಸಿದ್ದರು. ಸಿದ್ದವನಹಳ್ಳಿ ನಿಜಲಿಂಗಪ್ಪನವರಂಥ ಅತಿರಥರು ಕೂಡ ಆಗಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರನ್ನು ‘ಕರ್ನಾಟಕದ ಅಭಿಮನ್ಯು’ ಎಂದು ಬಣ್ಣಿಸಿದ್ದರು. ವಾಟಾಳ್ ನಾಗರಾಜ್ ಕೂಡ ಸುದೀರ್ಘ ಭಾಷಣ ಮಾಡಿದ್ದರು. ಬಿ.ಡಿ. ಜತ್ತಿ ಪ್ರಸ್ತಾಪಿಸಿದ್ದ ಹೆಸರು, ಕೆಂಗಲ್ ಹನುಮಂತಯ್ಯನವರ ಪ್ರಯತ್ನ ಪ್ರಸ್ತಾಪಿಸಿದ್ದರಲ್ಲದೇ, ಕುವೆಂಪು ರಚಿಸಿದ ‘ಬಾರಿಸು ಕನ್ನಡ ಡಿಂಡಿಮವ’, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಕವಿತೆಗಳನ್ನು ವಾಚಿಸಿದ್ದರು.
ಶೃಂಗೇರಿ ಶಾಸಕರಾಗಿದ್ದ ವೀರಪ್ಪಗೌಡ ಮಾತನಾಡಿ, ‘‘1956ರಲ್ಲಿ ಕರ್ನಾಟಕ ಮಾಡಿಯೇ ತೀರಬೇಕು ಎನ್ನುತ್ತಿದ್ದ ಕಾಲದಲ್ಲಿ, ಮಂತ್ರಿಯೊಬ್ಬರು ನನಗೆ ‘ನೀವು ಕರ್ನಾಟಕವನ್ನು ವಿರೋಧಿಸಬೇಕು, ಮಂಡ್ಯಕ್ಕೆ ಬರಬೇಕು, ಮೆರವಣಿಗೆ ಆಗಬೇಕು’ ಎಂದು ಒತ್ತಾಯಿಸಿದರು. ಅದಕ್ಕೆ ಒಪ್ಪದ ನಾನು, ನನ್ನ ಹತ್ತಿರ ಬರಬೇಡಿ ಅಂತ ಹೇಳಿ ಕಳಿಸಿದ್ದೆ’ ಎಂದು ಹಳೆಯ ಘಟನೆ ನೆನಪಿಸಿಕೊಂಡರು.
ಮಲ್ಲೇಶ್ವರ ಶಾಸಕ ಎಂ.ಎಸ್. ಕೃಷ್ಣನ್, ಚಿಕ್ಕಪೇಟೆ ಶಾಸಕ ಕೆ.ಎಂ. ನಾಗಣ್ಣ, ಕೆ. ಪ್ರಭಾಕರ್, ಶಿರಹಟ್ಟಿ ಶಾಸಕ ವಿ.ವಿ. ವಾಯಿ, ಕುದೂರು ಶಾಸಕ ಬೆಟ್ಟಸ್ವಾಮಿಗೌಡ, ಸೊರಬ ಶಾಸಕ ಎಸ್. ಬಂಗಾರಪ್ಪ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ನಾಮಕರಣವಲ್ಲದೆ ಜಾತಿ, ಭಾಷೆ ಮುಂತಾದ ವಿಷಯಗಳ ಬಗ್ಗೆಯೂ ಮಾತನಾಡಿದ್ದರು. ಕೊನೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಅರಸು, ‘‘ನಿರ್ಣಯಕ್ಕೆ ಸರ್ವಾನುಮತದ ಸ್ವಾಗತ ಸಿಕ್ಕಿರುವುದು ಬಹಳ ಹೆಮ್ಮೆ, ಸಂತೋಷಪಡತಕ್ಕಂಥ ವಿಚಾರ’ ಎಂದು ಹೇಳಿ, ಕೊನೆಯಲ್ಲಿ ‘‘ಕರ್ನಾಟಕಕ್ಕೆ...’ ಎಂದು ಘೊಷಣೆ ಕೂಗಿದರು. ಇಡೀ ಸದನ ‘‘ಜಯವಾಗಲಿ’ ಎಂದು ದನಿಗೂಡಿಸಿತ್ತು. ಬಂಗಾರಪ್ಪ, ವಾಟಾಳ್ ಇದೇ ಸಂದರ್ಭದಲ್ಲಿ ಶಾಸಕರ ಮೇಲೆ ಮಲ್ಲಿಗೆ ಹೂವು ಎರಚಿ ಸಂಭ್ರಮಿಸಿದ್ದರು.
ಟೀಕೆಗೊಳಗಾಗಿದ್ದ ರಾಜಗೋಪಾಲಾಚಾರಿ!
‘ಕರ್ನಾಟಕ ಎಂಬ ಪದವೇ ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದ್ದ ಭಾರತದ ಕೊನೆಯ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಮಾತು ಸದನದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ‘ಮದ್ರಾಸಿನಲ್ಲಿ ತಮಿಳುನಾಡು ಎಂದು ಹೆಸರು ಬದಲಾವಣೆ ಮಾಡುವಾಗ ಕರ್ನಾಟಕದ ಜನತೆ ಏನೂ ಹೇಳಿರಲಿಲ್ಲ. ಆದರೆ ಕರ್ನಾಟಕ ಎಂಬ ಪದ ಗೊತ್ತಿಲ್ಲ ಎಂದು ಹೇಳಿರುವುದು ನಾಡಿನ ಜನರಿಗೆ ಮಾಡಿದ ಅವಮಾನ’ ಎಂದು ಹಲವರು ತರಾಟೆಗೆ ತೆಗೆದುಕೊಂಡಿದ್ದರು. ಜತೆಗೆ ಕರ್ನಾಟಕ ಪದದ ಅರ್ಥದ ಬಗ್ಗೆ ವಿವರಣೆಯನ್ನೂ ನೀಡಿದ್ದರು.
ದೇವರಾಜ ಅರಸು ಅವರ ಆತ್ಮೀಯ ಗೆಳೆಯರಾಗಿದ್ದ ಸಾಹಿತಿ ಚದುರಂಗ ಅವರಿಂದ ಮೈಸೂರು ರಾಜ್ಯಕ್ಕೆ ಕರ್ನಾಟಕ ಹೆಸರಿನ ಸಲಹೆ. ಆಲೂರು ವೆಂಕಟರಾಯರು ರಚಿಸಿದ ಕರ್ನಾಟಕ ಗತ ವೈಭವ ಪುಸ್ತಕದ ಶೀರ್ಷಿಕೆಯ ಕರ್ನಾಟಕ ಪದ ಸ್ಪೂರ್ತಿ.
17 ವರ್ಷಗಳ ಕಾಲ ಕರ್ನಾಟಕ ಹೆಸರಿಗಾಗಿ ರಾಜ್ಯದಲ್ಲಿ ಹೋರಾಟ ನಡೆಯಿತು. ಸದನದ ಹೊರಗಡೆಯ ಹೋರಾಟದ ಜತೆಗೆ ಸದನದ ಒಳಗಡೆ ಅಂದಾನಪ್ಪ ದೊಡ್ಡಮೇಟಿ ಚರ್ಚೆಗೆ ನಾಂದಿ ಹಾಡಿದರು. ವಿಧಾನಸಭೆಯಲ್ಲಿ 1956ರ ಡಿಸೆಂಬರ್ನಲ್ಲಿ ಕರ್ನಾಟಕ ಹೆಸರಿನ ಬಗ್ಗೆ 2 ದಿನ ಚರ್ಚೆ ನಡೆದರೂ ಫಲಿತಾಂಶ ಶೂನ್ಯ. 1960ರಲ್ಲಿ ಮತ್ತೊಮ್ಮೆ ಗೊತ್ತುವಳಿ ಮಂಡನೆಯಾದರೂ ಚರ್ಚೆಗೆ ಬರಲಿಲ್ಲ. ಇದಾದ ನಂತರ ಐದಾರು ವರ್ಷಗಳ ಕಾಲ ಹತ್ತು ಹಲವು ಬಾರಿ ಸದನದಲ್ಲಿ ನಿಲುವಳಿ ಮಂಡನೆಯಾಗುತ್ತಿತ್ತಾದರೂ ನಿರ್ಣಯ ಕೈಗೊಳ್ಳುವಲ್ಲಿ ವಿಫಲ.
ಮೈಸೂರು ರಾಜ್ಯವೇ ಇರಬೇಕು ಎಂಬ ವಾದವೂ ಪ್ರಬಲವಾಗಿತ್ತು. ಮೈಸೂರು ಕರ್ನಾಟಕ, ಮೈಸೂರು ಕನ್ನಡನಾಡು, ಕನ್ನಡ ನಾಡು, ಕರ್ಣಾಟಕ, ಕರ್ನಾಟಕ ಎನ್ನುವ ಹೆಸರುಗಳು ಚರ್ಚೆಗೆ ಬಂದಿದ್ದವು.
ಕವಿಗಳು, ಸಾಹಿತಿಗಳು ಕರ್ನಾಟಕ ಹೆಸರಿನ ಪರ ದನಿ ಎತ್ತುವ ಮೂಲಕ ಹೋರಾಟಕ್ಕೆ ಬೆಂಬಲ. ಬಿ.ಎಂ. ಶ್ರೀಕಂಠಯ್ಯ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಟಿ.ಎಸ್. ವೆಂಕಣ್ಣಯ್ಯ, ಅ.ನ ಕೃಷ್ಣರಾವ್, ತಿ.ತಾ. ಶರ್ಮ, ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಸಾಹಿತಿಗಳು ಶಾಲಾ - ಕಾಲೇಜುಗಳಲ್ಲೂ ಕರ್ನಾಟಕ ಸಂಘ ಹೆಸರಿನಲ್ಲಿ ಸಂಘಗಳನ್ನು ಹುಟ್ಟುಹಾಕುವ ಮೂಲಕ ರಾಜ್ಯದ ಹೆಸರು ಬದಲಾವಣೆಯ ಕಾವು ಹೆಚ್ಚಿಸಿದ್ದರು.
ಮೈಸೂರಿನ ಹೆಸರನ್ನು ಕರ್ನಾಟಕ ಎಂದು ಬದಲಿಸುವುದಕ್ಕೆ ಸಾಕಷ್ಟು ಮಂದಿ ತ್ಯಾಗ ಮಾಡಿದ್ದಾರೆ. ಸ್ವಾಗತಾರ್ಹ ನಿರ್ಣಯ. ಆದರೆ ಹಲವು ಕನ್ನಡ ಪ್ರದೇಶಗಳು ಇನ್ನೂ ಹೊರಗೆ ಉಳಿದಿರುವುದು ಚಿಂತೆಯ ವಿಷಯ.
| ಎಚ್.ಡಿ. ದೇವೇಗೌಡ ಆಗಿನ ಹೊಳೆನರಸೀಪುರ ಶಾಸಕ
ರಾಜ್ಯದ ಹೆಸರು ಕರ್ನಾಟಕ ಆಗಬೇಕು ಎಂದು ಎಲ್ಲರೂ ಹೇಳುತ್ತಿರುವಾಗ ಮೈಸೂರಿನ ಚರಿತ್ರೆ ಹಾಗೂ ಕೊಡುಗೆ ಬಗ್ಗೆ ಭಾಷಣ ಮಾಡುವುದು ಅನವಶ್ಯಕ.
| ಕಾಗೋಡು ತಿಮ್ಮಪ್ಪ ಆಗಿನ ಸಾಗರ ಕ್ಷೇತ್ರದ ಶಾಸಕ
ಮೂರೂವರೆ ಕೋಟಿ ಕನ್ನಡಿಗರಿಗೆ ಸಂತೋಷದ ದಿನ. ನನಗೆ ಬಹಳ ಆನಂದವಾಗಿದೆ. ಈ ರಾಜ್ಯದ ಹೆಸರು ಬದ ಲಾವಣೆ ಮಾಡಬೇಕೆಂದು ಅನೇಕರು ಬಹಳ ಹೋರಾಟ ನಡೆಸಿದ್ದರು. ಅದರ ಫಲ ಇದು.
| ವಾಟಾಳ್ ನಾಗರಾಜ್ ಆಗಿನ ಚಾಮರಾಜಪೇಟೆ ಶಾಸಕ
1856ರಲ್ಲಿ ಕರ್ಣಾಟಕವೆಂಬ ಹೆಸರಿನ ಬಗ್ಗೆ ಚಳವಳಿ ಪ್ರಾರಂಭವಾಯಿತು. ಅದಾಗಿ 116 ವರ್ಷಗಳ ನಂತರ ಫಲ ದೊರೆತಿದೆ.
| ನಾಗಮ್ಮ ಕೇಶವಮೂರ್ತಿ ಆಗಿನ ದಾವಣಗೆರೆ ಶಾಸಕಿ
ಕರ್ನಾಟಕ ಎಂಬ ಹೆಸರು ಸೆಕ್ಯುಲರಿಸಂ ಆಧಾರದ ಮೇಲೆ ನಿಂತಿದೆ. ಈ ಹೆಸರಿನಿಂದ ರಾಜ್ಯದಲ್ಲಿ ಸೈಕಲಾಜಿಕಲ್ ಮತ್ತು ಎಮೋಷನಲ್ ಇಂಟಿಗ್ರೇಷನ್ ತರಬೇಕೆಂಬುದು ನಮ್ಮ ಉದ್ದೇಶ.
| ಎಸ್.ಎಂ. ಯಾಹ್ಯಾ ಆಗಿನ ಭಟ್ಕಳ ಶಾಸಕ