ನ್ಯೂಸ್

ಗುರುವಿನ ಅಸ್ತಿತ್ವದಿಂದಲೇ ಜ್ಞಾನ

ಗುರುಮಂಡಲ ಎಂದರೆ, ಅತ್ಯುನ್ನತ ವಾದುದರ ಬಳಿಗೆ ಹೋಗುವಾಗ ನಿಮ್ಮಲ್ಲಿ ಅನೇಕ ಪ್ರಲೋಭನೆಗಳು ಉಂಟಾಗುತ್ತವೆ, ಜೀವನದಲ್ಲಿ ಎಲ್ಲ ಕಡೆಗಳಿಂದಲೂ ಸೆಳೆಯಲ್ಪಡುತ್ತೀರಿ. ಅತ್ಯುನ್ನತವಾದುದರ ಕಡೆಗೆ ಹೋಗುವ ಸಂಕಲ್ಪವನ್ನು ಹೊಂದಿರುತ್ತೀರಿ. ಆದರೆ ನಿಮ್ಮನ್ನು ಪ್ರಚೋದಿಸುವಂತಹ ಅನೇಕ ವಿಷಯಗಳು, ರಾಗ-ದ್ವೇಷಗಳು ಇರುತ್ತವೆ. ‘ಓ ಇದೆಲ್ಲವೂ ಗುರುಮಂಡಲದ ಭಾಗವೇ!’ ಎಂದು ತಿಳಿದು ಸುಮ್ಮನೆ ಮುನ್ನಡೆಯುತ್ತಲಿರಿ.

‘ಋಷೀಣಾಂ ಯಥ ಚಿತ್ತಾನಾಂ ವಾಚಂ ಅರ್ಥಾನು ಧಾವತೆ’ ಋಷಿಗಳ ಚೈತನ್ಯವು ಪೂರ್ಣವಾಗಿರುತ್ತದೆ. ಅವರು ಏನೇ ಹೇಳಿದರೂ, ಆ ಶಬ್ದಗಳ ಅರ್ಥವು ಅದರ ಹಿಂದೆಯೇ ಓಡಿಬರುತ್ತವೆ. ಓರ್ವ ಜ್ಞಾನಿಯು, ನೀವು ಪ್ರೇಮ ಎಂದು ಹೇಳಿದರೆ, ಆ ಮಾತನ್ನು ಕೇಳಿಸಿಕೊಂಡಾಗ, ಆ ಮಾತನ್ನು ನೀವು ಬುದ್ಧಿಯ ಮೂಲಕ ಮಾತ್ರ ಅರ್ಥ ಮಾಡಿಕೊಳ್ಳದೆ, ಅದು ಹೃದಯವನ್ನೂ ಸ್ಪರ್ಶಿಸುತ್ತದೆ. ಅನುಭೂತಿಯ ರೂಪದಲ್ಲಿ ಅದು ಅನುಭವಕ್ಕೆ ಬರುತ್ತದೆ. ಗುರುಗಳ, ಜ್ಞಾನಿಗಳ ಮಾತಿನಲ್ಲಿ ಅಷ್ಟೊಂದು ಆಳ ಇರುತ್ತದೆ. ಆದ್ದರಿಂದ ಗುರು ಸಾನ್ನಿಧ್ಯದಲ್ಲಿ ಕುಳಿತು ಕೇಳಿಸಿಕೊಳ್ಳುವುದರಿಂದ; ಗುರುವಿನ ಮುಖದಿಂದ ಕೇಳಿಸಿಕೊಳ್ಳುವುದರಿಂದ ಬಹಳ ಲಾಭವಿದೆ.

ಗುರುಮುಖದಿಂದ ಕೇಳಿಸಿಕೊಳ್ಳುವುದರಿಂದ ಜೀವನವು ಅನುಭವದ ರೂಪದಲ್ಲಿ ನಮ್ಮ ಬಳಿಗೆ ಇಳಿದು ಬರುತ್ತದೆ. ಕಾಗದದ ಹಾಳೆಗಳನ್ನು ತಿರುಗಿಸಿ, ತಿರುಗಿಸಿ ಏನೋ ಒಂದನ್ನು ಗುರುಗಳು ಹೇಳುವುದಿಲ್ಲ, ಜೀವನದ ಸಾರವನ್ನೇ ನಿಮಗೆ ಕೊಡುತ್ತಾರೆ. ಜೀವನದ ಅನುಭವದಿಂದ ಹೇಳಿದಾಗ, ಅದರ ಪ್ರಭಾವ ಎಲ್ಲರ ಮೇಲೂ ಬೀರುತ್ತದೆ. ಗುರುಗಳ ಅನುಭವವನ್ನು ಎಲ್ಲರಿಗೂ ಅನುಭವಿಸಲು ಸಾಧ್ಯವಾಗುತ್ತದೆ. ನಮ್ಮ ದೈಹಿಕ ಅಸ್ತಿತ್ವಕ್ಕಿಂತಲೂ ಹೆಚ್ಚಾಗಿ ನಮ್ಮ ಕಂಪನಗಳಿಂದ ನಾವು ಹೆಚ್ಚಾಗಿ ಸಂರ್ಪಕಿಸುತ್ತೇವೆ. ನಮ್ಮ ಮಾತನ್ನು ಬೇರೆಯವರಿಗೆ ತಲುಪಿಸುವುದಾದರೂ ಹೇಗೆ? ಅದು ನಮ್ಮ ಚೈತನ್ಯದಲ್ಲಿದ್ದರೆ, ನಮ್ಮ ಅಸ್ತಿತ್ವದಲ್ಲಿದ್ದರೆ ಅದು ಬಲು ಬೇಗನೆ ತಲುಪುತ್ತದೆ.

ಜ್ಞಾನವು ನಮ್ಮ ಸ್ವಭಾವವೇ ಆಗಿದ್ದರೆ, ಅದನ್ನು ಶಬ್ದಗಳಿಂದ ಹೇಳುವ ಅವಶ್ಯಕತೆಯೂ ಇರುವುದಿಲ್ಲ. ನಮ್ಮ ಇರುವಿಕೆ ಮಾತ್ರದಿಂದಲೇ ಎಲ್ಲರಿಗೂ ಪ್ರೇಮದ ಅನುಭವವಾಗುತ್ತದೆ. ನಮ್ಮ ಸ್ವಭಾವದಲ್ಲಿ, ನಮ್ಮ ಚೇತನದಲ್ಲಿ ಪ್ರೇಮವಿಲ್ಲದಿದ್ದರೆ, ಒಂದು ಗಂಟೆ, ಎರಡು ಗಂಟೆ ಅದರ ಬಗ್ಗೆ ಕೂಗಾಡಿ ಹೇಳಿದರೂ ಅದರಿಂದ ಯಾವ ಪ್ರಭಾವವೂ ಆಗುವುದಿಲ್ಲ. ನಾವು ಇತರರಿಗೆ ತಲುಪಿಸುವುದು ಕೇವಲ ನಮ್ಮ ಶಬ್ದಗಳನ್ನಲ್ಲ, ನಮ್ಮ ಅಸ್ತಿತ್ವದಲ್ಲಿರುವ ಕಂಪನಗಳನ್ನೂ ತಲುಪಿಸುತ್ತೇವೆ. ಗುರುಗಳ ಇಡೀ ಅಸ್ತಿತ್ವವೇ ಮಾತನಾಡುತ್ತದೆ.

ಸತ್ಯ ಎಂದರೆ ಕೇವಲ ಬುದ್ಧಿಯ ಮೂಲಕ ಆಡುವ ಮಾತುಗಳಲ್ಲ. ಸತ್ಯವೆಂದರೆ ಇಡೀ ಅಸ್ತಿತ್ವವೇ ಮಾತನಾಡುವುದು. ಒಂದು ಪುಟ್ಟ ಮಗು ಅತ್ತರೆ, ಅದು ತನ್ನ ಕಣಕಣದಿಂದಲೂ ಅಳುತ್ತದೆ. ನಗುತ್ತಿದ್ದರೆ ಮಗುವು ಹೊಟ್ಟೆಯಿಂದ ಪೂರ್ಣವಾಗಿ ನಗುತ್ತದೆ. ಅದರ ಪ್ರತಿಯೊಂದು ಕಣದಿಂದಲೂ ನಗು ಹೊರಹೊಮ್ಮುತ್ತದೆ. ಮಗುವಿನ ಅಸ್ತಿತ್ವದ ಕಣಕಣದಿಂದಲೂ ನಗು ಅಥವಾ ಅಳು ಬರುತ್ತದೆ. ಅದೇ ರೀತಿಯಾಗಿ ಯೋಗಿ, ಗುರು ತಮ್ಮ ಅಸ್ತಿತ್ವದಿಂದ ಹೇಳುತ್ತಾರೆ, ಶಬ್ದಗಳಿಂದಲ್ಲ. ಇಬ್ಬರು ಸಂತರು, ಜ್ಞಾನಿಗಳು ಭೇಟಿಯಾದಾಗ ಅವರು ಯಾವ ರೀತಿಯ ಮಾತುಕತೆ ನಡೆಸಬಹುದು ಎಂದುಕೊಂಡಿದ್ದೀರಿ? ಕಬೀರ್ ಮತ್ತು ಫರೀದ್ ಒಂದೇ ಕಾಲದಲ್ಲಿದ್ದ ಸಂತರು; ಜ್ಞಾನಿಗಳು. ಒಂದು ದಿನ ಅವರಿಬ್ಬರೂ ಒಂದೇ ಸ್ಥಳದಲ್ಲಿ ತಂಗುವಂತಾಯಿತು. ಕಬೀರರ ಹಾಗೂ ಫರೀದರ ಶಿಷ್ಯರು ಇದರಿಂದ ಪುಳಕಗೊಂಡರು. ಇಬ್ಬರು ಮಹಾನ್ ಸಂತರು, ಜ್ಞಾನಿಗಳು ಭೇಟಿಯಾಗಿದ್ದಾರೆ. ಅವರಿಬ್ಬರ ನಡುವೆ ದೊಡ್ಡ ಜ್ಞಾನದ ಚರ್ಚೆಯಾಗಬಹುದು.

ನಮಗೆಲ್ಲರಿಗೂ ಇಂದು ಜ್ಞಾನದ ಹಬ್ಬ ಕಾದಿದೆ ಎಂದು ಕಾತುರದಿಂದ ಕಾಯುತ್ತಿದ್ದರು. ಏನೂ ಆಗಲಿಲ್ಲ! ಒಂದು ದಿನ, ಎರಡು ದಿನ, ಮೂರನೆಯ ದಿನ ಏನೂ ಆಗಲಿಲ್ಲ. ಅವರು ಸುಮ್ಮನೆ ಒಬ್ಬರನ್ನೊಬ್ಬರು ನೋಡಿಕೊಂಡು ಮುಗುಳ್ನಕ್ಕರಷ್ಟೆ. ಮೂರನೆಯ ದಿನ ಇಬ್ಬರೂ ಅಲ್ಲಿಂದ ಹೊರಟರು, ಒಂದು ಮಾತನ್ನೂ ಆಡದೆಯೇ! ಜನರಿಗೆ ಇದರಿಂದ ಗೊಂದಲವಾಯಿತು. ‘ನೀವೇಕೆ ಮಾತನಾಡಲಿಲ್ಲ?!’ ಎಂದು ಕಬೀರರ ಶಿಷ್ಯರು ಕೇಳಿದಾಗ, ‘ಅದರ ಅವಶ್ಯಕತೆಯೇ ಇರಲಿಲ್ಲ! ಮಾತುಗಳ ಅವಶ್ಯಕತೆಯಾದರೂ ಏನು? ಮಾತನಾಡಲು ಏನಿದೆ? ನಮ್ಮಿಬ್ಬರಿಗೂ ತಿಳಿದ ವಿಷಯವೇ’ ಎಂದರು. ನೀವು ಯಾವುದೇ ಜ್ಞಾನಿಯನ್ನು ಭೇಟಿ ಮಾಡುವಾಗ, ಅವರೆದುರು ನಿಮ್ಮನ್ನು ಕೀಳೆಂದು ಭಾವಿಸಿಕೊಳ್ಳಬೇಡಿ. ಆದರೆ ಬಹಳ ವಿನಮ್ರರಾಗಿರಿ.

ಜ್ಞಾನವು ಮಾತುಗಳಿಗೆ ಅತೀತವಾಗಿ ಇರುವಂಥದ್ದು. ಎಲ್ಲ ಮಾತುಗಳ ಸಾರವೇ ಜ್ಞಾನ. ಮಾತುಗಳನ್ನು ದಾಟಿದರೆ, ಅದೇ ಜ್ಞಾನ. ‘ಗುರುವಿಲ್ಲದೆ ಗತಿಯಿಲ್ಲ’ ಎಂಬ ಪ್ರಾಚೀನ ಹೇಳಿಕೆಯಿದೆ. ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಗುರು ಎಂದರೆ ಜ್ಞಾನ. ಜ್ಞಾನದ ಮಾರ್ಗದಲ್ಲಿ ನಿಮಗೆ ಮಾರ್ಗದರ್ಶನವನ್ನು ನೀಡಿ, ನಿಮ್ಮಲ್ಲಿರುವ ಪ್ರಾಣಶಕ್ತಿಯನ್ನು ಬೆಳಗಿಸುವವರೇ ಗುರು. ಪ್ರತಿಯೊಬ್ಬರಲ್ಲೂ ಗುರುವಿನ ತತ್ವವಿದೆ. ನಿಮಗೆ ತಿಳಿದೋ, ತಿಳಿಯದೆಯೋ, ಏನನ್ನೂ ಎದುರು ನೋಡದೆ ಇತರರಿಗೆ ಏನನ್ನಾದರೂ ಮಾಡಿದ್ದರೆ, ನೀವು ಗುರುವಿನ ಪಾತ್ರವನ್ನು ಮಾಡಿದಂತೆಯೇ. ಗುರುತತ್ವವನ್ನು ಆದರಿಸಬೇಕು. ಗುರುತತ್ವದಲ್ಲಿ ನಾವು ಚಲಿಸತೊಡಗಿದಾಗ, ಎಲ್ಲ ಗಡಿಗಳೂ ಮುರಿಯುತ್ತವೆ ಮತ್ತು ಇಡೀ ವಿಶ್ವದೊಡನೆ ಒಂದಾಗಿರುವಂತೆ ಭಾವಿಸತೊಡಗುತ್ತೀರಿ.

ಜ್ಞಾನವು ನಮ್ಮಲ್ಲಿ ಮೂಡಿದಾಗ ಸ್ವದೂಷಣೆಯೇ ಇರುವುದಿಲ್ಲ. ಗುರುವಿನ ಬಳಿಗೆ ಬಂದಿರುವಿರೆಂದರೆ, ನಿಮ್ಮೊಡನೆ ಸದಾ ಗುರುವಿದ್ದಾರೆ ಎಂಬ ವಿಶ್ವಾಸವಿರುತ್ತದೆ. ನಮಗೇನೆಲ್ಲ ಬೇಕೋ ಅದು ನಡೆಯುತ್ತದೆ ಮತ್ತು ನಮಗೆ ದಾರಿ ತೋರಿಸಲಾಗುತ್ತದೆ. ಗುರುಗಳ ಬಳಿ ನೀವು ಇದ್ದು, ಜೀವನದಲ್ಲಿ ಶಾಂತಿಯನ್ನು ಪಡೆಯುವ ಮಾರ್ಗವೆಂದರೆ, ಆಧ್ಯಾತ್ಮಿಕ ಸಾಧನೆ, ಸತ್ಸಂಗ, ಮನನ ಮತ್ತು ಭಕ್ತಿಯ ಮೂಲಕ. ಆದ್ದರಿಂದ ಆಧ್ಯಾತ್ಮಿಕತೆಯು ನಿಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತದೆ. ಗುರುವಿನ ಬಳಿ ದೈಹಿಕವಾಗಿ ಸಮೀಪದಲ್ಲಿ ಇರದಿದ್ದರೂ, ಮನಸ್ಸು ಮತ್ತು ಆತ್ಮದಿಂದ ಗುರುವಿನ ಸಮೀಪದಲ್ಲಿರ ಬಹುದು. ವಿಪರೀತ ಗೊಂದಲ ಉಂಟಾದರೆ ಗುರುವಿಗೆ ಶರಣಾಗಿ, ಗುರುವು ಮತ್ತೆ ನಿಮ್ಮನ್ನು ನಿಮ್ಮ ಅಂತರಾತ್ಮನ ಕಡೆಗೆ ಕರೆದೊಯ್ಯುತ್ತಾರೆ.