ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿಯ ಬೇಡಿಕೆ ಸೇರಿ ಹಲವು ಮನವಿಗಳ ಈಡೇರಿಕೆಗಾಗಿ ಆರಂಭಗೊಂಡಿರುವ ರೈತ ಪ್ರತಿಭಟನೆಯ ಎರಡನೇ ದಿನವೂ ಪೊಲೀಸರು ಮತ್ತು ರೈತರ ಮಧ್ಯೆ ಸಂಘರ್ಷ ಮುಂದುವರಿದಿದೆ.
ಎರಡನೇ ದಿನವೂ ಹೋರಾಟ ಮುಂದುವರಿಸಿದ ಹೋರಾಟಗಾರರು, ಗಡಿಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ರೈತರು ಮುರಿಯಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಿದರು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿ 24 ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಪೊಲೀಸರು ರಬ್ಬರ್ ಬುಲೆಟ್ಗಳನ್ನು ಹಾರಿಸಿದ್ದು, ಹರ್ಯಾಣದ ಅಂಬಾಲಾ ನಗರಕ್ಕೆ ಸಮೀಪವಿರುವ ಶಂಭು ಗಡಿಯಲ್ಲಿ ನಡೆಸಲಾದ ಈ ದಾಳಿಯಲ್ಲಿ 60 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆಂದು ರೈತ ಮುಖಂಡರು ಹೇಳಿದ್ದಾರೆ. ಶಂಭು ಗಡಿಯಲ್ಲಿ ಹರ್ಯಾಣ ಪೊಲೀಸರು ಡ್ರೋನ್ ಬಳಸುತ್ತಿರುವುದಕ್ಕೆ ಪ್ರತಿಯಾಗಿ, ರೈತರು ಗಾಳಿಪಟಗಳ ಮೂಲಕ ಅಡ್ಡಿಪಡಿಸಿ ಡ್ರೋನ್ ಕಾರ್ಯಾಚರಣೆಗೆ ತಿರುಗೇಟು ನೀಡುತ್ತಿದ್ದ ದೃಶ್ಯಾವಳಿಗಳೂ ಕಂಡುಬಂದಿವೆ.
ಗ್ರಾಮೀಣ ಭಾರತ್ ಬಂದ್ಗೆ ಕರೆ: ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕಾರ್ವಿುಕ ಸಂಘಟನೆಗಳೊಂದಿಗೆ ಸೇರಿ ಫೆಬ್ರವರಿ 16ರಂದು ಗ್ರಾಮೀಣ ಭಾರತ್ ಬಂದ್ ಗೆ ಕರೆ ನೀಡಿದೆ. ಸಿಪಿಐ(ಎಂ) ಸೇರಿದಂತೆ ವಿವಿಧ ಸಂಘಟನೆಗಳು ಬಂದ್ಗೆ ಬೆಂಬಲ ಘೊಷಿಸಿವೆ. ರೈತರ ಮೇಲೆ ಅಶ್ರುವಾಯು ಶೆಲ್ಗಳಿಂದ ದಾಳಿ ಮಾಡಲು ಡ್ರೋನ್ಗಳನ್ನು ಬಳಸುವುದನ್ನು ನಾವು ಎಂದಿಗೂ ಕೇಳಿರಲಿಲ್ಲ. ಸರ್ಕಾರ ರೈತರ ಪಾದಯಾತ್ರೆ ತಡೆಯುತ್ತಿದೆ. ನಮಗೆಲ್ಲ ಆಹಾರ ನೀಡುವ ರೈತರನ್ನು ಗೌರವಿಸುವುದನ್ನು ಈ ಸರ್ಕಾರ ಕಲಿಯಬೇಕಿದೆ ಎಂದು ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಕಿಡಿಕಾರಿದ್ದಾರೆ.
ಆರೋಗ್ಯ ವಿಚಾರಿಸಿದ ರಾಹುಲ್: ಶಂಭು ಗಡಿಯಲ್ಲಿ ಪೊಲೀಸ್ ದಾಳಿಯಲ್ಲಿ ಗಾಯಗೊಂಡ ರೈತನೊಬ್ಬನ ಆರೋಗ್ಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ರಾಜ್ಪುರ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ರಾಹುಲ್ ಗಾಂಧಿಯವರಿಗೆ ಕರೆ ಮಾಡಿ, ರೈತರ ಜತೆ ಮೊಬೈಲ್ ಫೋನ್ ಮೂಲಕ ಮಾತನಾಡಿಸಿದರು.
ಚಂಡೀಗಢದಲ್ಲಿ ಸಭೆ: ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ಮಧ್ಯೆ ನಡೆದ ಮೊದಲ ಸಭೆ ವಿಫಲಗೊಂಡ ಹಿನ್ನೆಲೆಯಲ್ಲಿ ಚಂಡೀಗಢದಲ್ಲಿ ಗುರುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ರೈತರ ಕೆಲ ಬೇಡಿಕೆಗಳಿಗೆ ಒಪ್ಪಿಗೆಯಿದೆ. ಆದರೆ ಎಂಎಸ್ಪಿಗೆ ಕಾನೂನಿನ ಖಾತರಿ ನೀಡುವುದಕ್ಕೆ ಸಮಗ್ರ ಚರ್ಚೆಯಾಗಬೇಕು. ತಕ್ಷಣಕ್ಕೆ ಕಾನೂನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಹೇಳಿದ್ದರು. ಚಂಡೀಗಢದಲ್ಲಿ ನಡೆಯುವ ಮಾತುಕತೆ ಅಪೂರ್ಣಗೊಂಡರೆ ದಿಲ್ಲಿ ಗಡಿಯಲ್ಲಿ ರೈತ ಸಂಘಟನೆಗಳ ಹೋರಾಟ ಮತ್ತಷ್ಟು ಜೋರಾಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಆರೋಪ: ಸ್ವಾಮಿನಾಥನ್ ಆಯೋಗದ ಶಿಫಾರಸು ಗಳನ್ನು ಜಾರಿಗೊಳಿಸದೆ ಕೇಂದ್ರ ರೈತರಿಗೆ ದ್ರೋಹ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದಕ್ಕಾಗಿ ಪಿಎಂ ಮೋದಿ ದೇಶದ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನುಬದ್ಧ ಗ್ಯಾರಂಟಿ ನೀಡಲು ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುವುದೇ ಏಕೈಕ ಮಾರ್ಗ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದು, ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಿಫಾರಸು ಮಾಡಿದ್ದನ್ನು ಈಗ ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು. 2014ರ ಬಿಜೆಪಿಯ ಪ್ರಣಾಳಿಕೆಯಾಗಲಿ ಅಥವಾ ಅಂದಿನ ಸಿಎಂ ಮೋದಿ ನೇತೃತ್ವದ ಸಮಿತಿಯ ಶಿಫಾರಸನ್ನು ಕೇಂದ್ರ ಜಾರಿ ಮಾಡದೆ ರೈತರಿಗೆ ದ್ರೋಹ ಬಗೆದಿದೆ. ಸ್ವಾಮಿನಾಥನ್ ಆಯೋಗ ವರದಿಯ 201 ಶಿಫಾರಸುಗಳಲ್ಲಿ ಯುಪಿಎ ಸರ್ಕಾರ 175 ಶಿಫಾರಸುಗಳನ್ನು ಜಾರಿಗೊಳಿಸಿತ್ತು ಎಂದರು.