ಜೈಪುರ: ಜೂನ್ 04ರಂದು ಪ್ರಕಟಗೊಂಡ 18ನೇ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಗೆದ್ದು ಮೂರನೇ ಬಾರಿಗೆ ಅಧಿಕಾರಕ್ಕೇರಿದ್ದು, ಇದರ ಬೆನ್ನಲ್ಲೇ ಬಿಜೆಪಿ ಸರ್ಕಾರದ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅವರ ಆಪ್ತ ಮೂಲಗಳು ಇದನ್ನು ಖಚಿತಪಡಿಸಿವೆ.
ರಾಜಸ್ಥಾನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿರುವ ಕಿರೋಡಿ ಲಾಲ್ ಮೀನಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ಧಾರೆ ಎಂದು ಹೇಳಲಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಅಧಿಕೃತವಾಗಿ ಪ್ರಕಟವಾಗಬೇಕಿದೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಿರೋಡಿ ಲಾಲ್ ಮೀನಾ ಪೂರ್ವ ರಾಜಸ್ಥಾನದ ಏಳು ಸ್ಥಾನಗಳ ಪೈಕಿ ಪಕ್ಷ ಒಂದರಲ್ಲಿ ಸೋತರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಕಿರೋಡಿ ಲಾಲ್ ಮೀನಾ ಅವರ ತವರು ಕ್ಷೇತ್ರ ದೌಸಾ ಸೇರಿದಂತೆ ಅನೇಕ ಕ್ಷೇತ್ರಗಳಲಲ್ಇ ಬಿಜೆಪಿ ಸೋಲುಂಡಿದೆ. ಈ ಹಿನ್ನೆಲೆಯಲ್ಲಿ ಕಿರೋಡಿ ಲಾಲ್ ಮೀನಾ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಿರೋಡಿ ಲಾಲ್ ಮೀನಾ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋತರೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಅದರಂತೆ ನಾನು ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದೇನೆ. ಅವರು ನನ್ನ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ. ಪೋಸ್ಟ್ ಮೂಲಕ ಮತ್ತೊಮ್ಮೆ ರಾಜೀನಾಮೆ ಪತ್ರವನ್ನು ಕಳುಹಿಸಿಕೊಟ್ಟಿದ್ದೇನೆ. ನಾಳೆ ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮುಂದಿನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಕಿರೋಡಿ ಲಾಲ್ ಮೀನಾ ಹೇಳಿದ್ದಾರೆ.