Shah Rukh Khan: ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ಖಾನ್ ಮತ್ತೆ ತಮ್ಮ ಹವಾ ಶುರು ಮಾಡಿದ್ದಾರೆ. ಪ್ರೀತಿ, ಆಕ್ಷನ್ ಮತ್ತು ಡೇಂಜರ್ ಮೂರೂ ಮಿಕ್ಸ್ ಆಗಿರುವ ಹೊಸ ಲುಕ್ನಲ್ಲಿ ಬಂದಿದ್ದು, ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮುಖದ ಮೇಲೆ ರಕ್ತದ ಕಲೆಗಳು, ಬಾಯಲ್ಲಿ ಹಿಡಿದ ಕೆಂಪು ಗುಲಾಬಿ ಹಾಗೂ ಹಿನ್ನೆಲೆಯಲ್ಲಿ ಉರಿಯುತ್ತಿರುವ ಬೆಂಕಿಯ ನಡುವೆ ಶಾರುಖ್ ಕೈಯಲ್ಲಿ ಗನ್ ಹಿಡಿದು ಗಂಭೀರವಾಗಿ ನೋಡುತ್ತಿರುವ ಪೋಸ್ಟರ್ ಸಖತ್ ವೈರಲ್ ಆಗ್ತಿದೆ.
ಅಕ್ಟೋಬರ್ 27ರಂದು ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹೋಸ ಲುಕ್ ಹಂಚಿಕೊಂಡ ಶಾರುಖ್, ‘ಆಜ್ ಫಿರ್ ಯಾದ್ ಆಯಾ... ಕಾತಿಲ್ ನಹೀ... ಆಶಿಕ್ ಹೂಂ...’ (ಇವತ್ತು ಮತ್ತೆ ನೆನಪಾಯ್ತು... ಕೊಲೆಗಡುಕ ಅಲ್ಲ, ಪ್ರೇಮಿ ನಾನು) ಅಂತ ಕ್ಯಾಪ್ಷನ್ ಹಾಕಿದ್ದಾರೆ. ಇದು ಅವರ ಸೂಪರ್ ಹಿಟ್ 1999ರ 'ಬಾದ್ಶಾ' ಸಿನಿಮಾದ ಫೇಮಸ್ ಹಾಡಿನ ಸಾಲಾಗಿದೆ.
ಶಾರುಖ್ ಖಾನ್ ಅವರ ಬಹುನಿರೀಕ್ಷಿತ 'ಕಿಂಗ್' ಸಿನಿಮಾ ಡಿಸೆಂಬರ್ 24, 2026ರಂದೇ ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ರಿಲೀಸ್ ಡೇಟ್ ಮುಂದೆ ಹೋಗಿದೆ ಅನ್ನುವ ವದಂತಿಗಳಿಗೆ ಬ್ರೇಕ್ ಬಿದ್ದಿದ್ದು, ಬಾಕ್ಸ್ ಆಫೀಸ್ನಲ್ಲಿ 'ಶಕ್ತಿ ಶಾಲಿನಿ' ಸಿನಿಮಾದ ಜತೆ ಪೈಪೋಟಿ ಇರಲಿದೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವನ್ನು 'ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್' ಹಾಗೂ 'ಮಾರ್ಫ್ಲಿಕ್ಸ್ ಪಿಕ್ಚರ್ಸ್' ಜಂಟಿಯಾಗಿ ನಿರ್ಮಿಸುತ್ತಿವೆ. 'ಪಠಾಣ್' ಹಿಟ್ ನಂತರ ಶಾರುಖ್ ಹಾಗೂ ಸಿದ್ಧಾರ್ಥ್ ಆನಂದ್ ಕಾಂಬಿನೇಷನ್ನಲ್ಲಿ ಬರ್ತಿರೋ ಎರಡನೇ ಸಿನಿಮಾ ಇದಾಗಿದೆ.
ಈ ಸಿನಿಮಾದ ಮತ್ತೊಂದು ಹೈಲೈಟ್ ಅಂದ್ರೆ ಶಾರುಖ್ ಖಾನ್ ತಮ್ಮ ಮಗಳು ಸುಹಾನಾ ಖಾನ್ ಜತೆ ಮೊದಲ ಬಾರಿಗೆ ಬೆಳ್ಳಿಪರದೆ ಹಂಚಿಕೊಳ್ಳುತ್ತಿದ್ದಾರೆ. 2023ರಲ್ಲಿ 'ದಿ ಅರ್ಚೀಸ್' ಸಿನಿಮಾ ಮೂಲಕ ನಟನೆಗೆ ಬಂದಿದ್ದ ಸುಹಾನಾಗೆ ಇದು ದೊಡ್ಡ ಪ್ರಾಜೆಕ್ಟ್.
ಇತ್ತೀಚೆಗೆ 'ಎಕ್ಸ್'ನಲ್ಲಿ ಫ್ಯಾನ್ಸ್ ಜತೆ ಮಾತನಾಡಿದ್ದ ಶಾರುಖ್, ಡಿಸೆಂಬರ್ನಲ್ಲಿ ಬೇರೆ ಸಿನಿಮಾಗಳು ರಿಲೀಸ್ ಆಗ್ತಿರೋ ಬಗ್ಗೆ ಕೇಳಿದ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ, ‘ನಮ್ಮ ಸಿನಿಮಾ ಮಧ್ಯದಲ್ಲಿ ಸಿಕ್ಕಿಹಾಕಿಕೊಳ್ಳಲ್ಲ, ಬಾಕಿ ಬ್ರೆಡ್ ಪೀಸ್ಗಳ ಬಗ್ಗೆ ಯೋಚನೆ ಮಾಡಿ... ನಾವಂತೂ ಮಧ್ಯದಲ್ಲಿರೋ ಟೇಸ್ಟಿ ಟಿಕ್ಕಿ’ ಅಂತ ಚಾತುರ್ಯದ ಉತ್ತರ ನೀಡಿದ್ದರು.
ಈ 'ಕಿಂಗ್' ಸಿನಿಮಾದಲ್ಲಿ ಶಾರುಖ್ ಮತ್ತು ಸುಹಾನಾ ಜತೆಗೆ ಅಭಿಷೇಕ್ ಬಚ್ಚನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ಅರ್ಷದ್ ವಾರ್ಸಿ, ರಾಣಿ ಮುಖರ್ಜಿ ಹಾಗೂ ರಾಘವ್ ಜುಯಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.