ನವದೆಹಲಿ: ಕೇರಳದಲ್ಲಿ 15 ವರ್ಷದ ಗರ್ಭಿಣಿ ಆನೆ ಪಟಾಕಿ ತುಂಬಿದ ಅನಾನಸ್ ತಿಂದು ಸಾವನ್ನಪ್ಪಿದ ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಈ ಕುರಿತು ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸುವಲ್ಲಿ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
"ಕೇರಳದ ಮಲ್ಲಪುರಂನಲ್ಲಿ ನಡೆದ ಆನೆಯ ಸಾವಿನ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಲು ನಾವು ಯಾವುದೇ ಹಿಂದೇಟು ಹಾಕುವುದಿಲ್ಲ. ಪಟಾಕಿಗಳನ್ನು ತಿನ್ನಿಸಿ ಕೊಲ್ಲುವುದು ಭಾರತೀಯ ಸಂಸ್ಕೃತಿಯಲ್ಲ ಎಂದು ಹೇಳಿದ್ದಾರೆ.
ಭೀಕರ ಘಟನೆಯ ಬಗ್ಗೆ ವ್ಯಾಪಕ ಖಂಡನೆ ಮತ್ತು ಆಕ್ರೋಶ ವ್ಯಕ್ತಗೊಂಡ ನಂತರ ಸಚಿವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಗರ್ಭಿಣಿ ಆನೆ ಜಂಬೋ, ಪಟಾಕಿ ತುಂಬಿದ ಅನಾನಸ್ ತಿನ್ನುತ್ತಿದ್ದಾಗ ಬಾಯಿಯಲ್ಲಿ ಪಟಾಕಿ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡು ಮಂಗಳವಾರ ಅಸು ನೀಗಿತು.
ಆನೆ ರಕ್ಷಣೆಯ ಕ್ಷಿಪ್ರ ಕಾರ್ಯಾಚರಣೆಯ ತಂಡದಲ್ಲಿದ್ದ ಅರಣ್ಯ ಅಧಿಕಾರಿ ಮೋಹನ್ ಕೃಷ್ಣನ್ ಆನೆಯ ಹತ್ಯೆಯನ್ನು ಜನರ ಗಮನಕ್ಕೆ ತಂದರು.
ಪಟಾಕಿ ಸ್ಫೋಟಗೊಂಡು ಆನೆಯ ನಾಲಿಗೆ ಮತ್ತು ಬಾಯಿಗೆ ತೀವ್ರವಾಗಿ ಗಾಯವಾಯಿತು. ನದಿ ಸೇರುವ ಮೊದಲು ಆನೆ ಹಳ್ಳಿಯ ಸುತ್ತಲೂ ನೋವಿನಿಂದ ಮತ್ತು ಹಸಿವಿನಿಂದ ನಡೆದಾಡಿತ್ತು"ಎಂದು ಅಧಿಕಾರಿ ಹೇಳಿದ್ದಾರೆ. ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಕೋರಿ ಈ ಹಿಂದೆ ಆನ್‌ಲೈನ್ ಅಭಿಯಾನ ಆರಂಭವಾಗಿತ್ತು. ಇಲ್ಲಿಯವರೆಗೆ ಅದಕ್ಕೆ 4,90,314 ಜನ ಸಹಮತ ವ್ಯಕ್ತಪಡಿಸಿದ್ದಾರೆ.