ನ್ಯೂಸ್

ಕೆನಡಾದಲ್ಲಿರುವ ಕಪಿಲ್ ಶರ್ಮಾ ಕೆಫೆ ಮೇಲೆ ಖಲಿಸ್ತಾನಿ ಉಗ್ರರ ಗುಂಡಿನ ದಾಳಿ, ಭಯಾನಕ ದೃಶ್ಯ ಸೆರೆ | Kapil Sharma Cafe

Kapil Sharma Cafe: ಕೆನಡಾದಲ್ಲಿರುವ ಬಾಲಿವುಡ್​ನ ಕಾಮಿಡಿ ನಟ ಕಪಿಲ್ ಶರ್ಮಾ ಅವರ ಕೆಫೆಯ ಮೇಲೆ ಖಲಿಸ್ತಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಕೆಫೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಈ ದಾಳಿ ಸಂಭವಿಸಿದೆ. ಹರ್ಜಿತ್ ಸಿಂಗ್ ನೇತೃತ್ವದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಪಿಲ್ ಶರ್ಮಾ ಒಡೆತನದ ಕ್ಯಾಪ್ಸ್ ಕೆಫೆಯನ್ನು ಗುರಿಯಾಗಿಸಿಕೊಂಡ ಖಲಿಸ್ತಾನಿ ದುಷ್ಕರ್ಮಿಗಳು, ರೆಸ್ಟೋರೆಂಟ್​ ಮೇಲೆ 9 ಸುತ್ತು ಗುಂಡಿನ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಲಡ್ಡಿ ಎನ್​ಐಎಯ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದು, ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಗೆ ಕಪಿಲ್​ ಈ ಹಿಂದೆ ನೀಡಿದ್ದ ಹೇಳಿಕೆಯೊಂದು ಕಾರಣವಿರಬಹುದು ಎಂದು ಹೇಳಲಾಗಿದೆ. ಆದರೆ, ಇದು ಎಷ್ಟು ನಿಜ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಗುಂಡಿನ ದಾಳಿಯ ಬೆನ್ನಲ್ಲೇ ಸ್ಥಳೀಯ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ವಿಕಾಸ್ ಪ್ರಭಾಕರ್ ಅಲಿಯಾಸ್ ವಿಕಾಸ್ ಬಗ್ಗಾ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹರ್ಜಿತ್ ಸಿಂಗ್ ಲಡ್ಡಿ ಮೋಸ್ಟ್​ ವಾಂಟೆಡ್​ ಕ್ರಿಮಿನಲ್. ಏಪ್ರಿಲ್ 2024ರಲ್ಲಿ ವಿಕಾಸ್​ರನ್ನು ಪಂಜಾಬ್‌ನ ರೂಪನಗರ ಜಿಲ್ಲೆಯ ಅವರದ್ದೇ ಅಂಗಡಿಯಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಯಿತು,(ಏಜೆನ್ಸೀಸ್).