ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ ಎಂದು ಹೇಳಿದ್ದ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರ ಹೇಳಿಕೆಗೆ ಇದೀಗ ಆಹಾರ ಸಚಿವ ಕೆ.ಎಚ್ ಮುನಿಯಪ್ಪ(KH Muniyappa) ತಿರುಗೇಟು ನೀಡಿದ್ದಾರೆ.
ಈ ಕುರಿತು ದೊಡ್ಡಬಳ್ಳಾಪುರದಲ್ಲಿ(Doddaballapur) ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, "ಬಿಜೆಪಿಯವರಿಗೆ(BJP) ಜನರು ಅಧಿಕಾರ ನೀಡಿಲ್ಲ! ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲವಾಗಲಿ ಎಂದು ಮಾಡಿದ್ದೇವೆ. ಜಾರಿಗೆ ತರುವಲ್ಲಿ ಸ್ವಲ್ಪ ತಡವಾಗಬಹುದೇ ವಿನಃ ಕೊಡುವುದಿಲ್ಲ ಎಂದೇನಿಲ್ಲ. ಶೀಘ್ರವೇ ಕೊಡುತ್ತೇವೆ" ಎಂದು ಹೇಳಿದರು.
"ಅಕ್ಕಿ ವಿಚಾರದಲ್ಲಿ ರಾಜಕೀಯ(Politics) ಬೆರೆಸುವುದು ಬೇಡ! ಬಿಜೆಪಿ ನಾಯಕರು ಅಕ್ಕಿ ಕೊಡಿಸಿ ಎಂದು ಹೇಳಿದ್ದರೆ, ಅವರಿಗೆ ಬಹಳ ದೊಡ್ಡ ಹೆಸರು ಬರುತ್ತಿತ್ತು. ಜನರಿಗೆ ಅಕ್ಕಿ ಕೊಡುವ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ" ಎಂದು ಹೇಳುವ ಮುಖೇನ ಬಿಎಸ್ವೈ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.