ನ್ಯೂಸ್

ಚಿನ್ನ ಕಳ್ಳಸಾಗಣೆಯಿಂದ ಗಳಿಸಿದ್ದನ್ನೆಲ್ಲ ಬಚ್ಚಿಟ್ಟಿದ್ದೆಲ್ಲಿ ಸ್ವಪ್ನಾ ಸುರೇಶ್​?

ನವದೆಹಲಿ: ಕೇರಳದಲ್ಲಿ ಸಂಚಲನವನ್ನೇ ಸೃಷ್ಟಿಸಿರುವ 15 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.

ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಸ್ವಪ್ನಾ ಸುರೇಶ್​ ಬ್ಯಾಂಕ್​ ಲಾಕರ್​ಗಳಲ್ಲಿ ಭಾರಿ ನಿಧಿಯೇ ಪತ್ತೆಯಾಗಿದೆ. ಸ್ಟೇಟ್​ ಬ್ಯಾಂಕ್​ ಇಂಡಿಯಾ ಹಾಗೂ ಫೆಡರಲ್​ ಬ್ಯಾಂಕ್​ನ ಲಾಕರ್​ಗಳಲ್ಲಿ ಇಡಲಾಗಿದ್ದ ಒಂದು ಕೋಟಿ ರೂ. ನಗದು ಹಾಗೂ ಒಂದು ಕೆ.ಜಿ. ಚಿನ್ನವನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಫೆಡರಲ್​ ಬ್ಯಾಂಕ್​ ಲಾಕರ್​ನಲ್ಲಿ 36.5 ಲಕ್ಷ ರೂ. ಹಾಗೂ ಎಸ್​ಬಿಐ ಲಾಕರ್​ನಲ್ಲಿ 64 ಲಕ್ಷ ರೂ. ಹಾಗೂ 984 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಸ್ವಪ್ನಾಳನ್ನು ಆರಂಭದಲ್ಲಿ ವಿಚಾರಣೆಗೊಳಪಡಿಸಿದಾಗ ಕಳ್ಳಸಾಗಣೆಯಿಂದ ಬಂದ ಹಣವನ್ನು ಲಾಕ್​ರಗಳಲ್ಲಿ ಇಟ್ಟಿರುವುದಾಗಿ ಹೇಳಿದ್ದಳು.

ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ಸಲ್ಲಿಸಿರುವ ದಾಖಲೆಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಸ್ವಪ್ನಾ ಹಾಗೂ ಪ್ರಕರಣದ ಇನ್ನೊಬ್ಬ ಆರೋಪಿ ಸಂದೀಪ್​ ನಾಯರ್​ನನ್ನು ಆಗಸ್ಟ್​ 21ರವರೆಗೆ ರಾಷ್ಟ್ರಿಯ ತನಿಖಾ ದಳದ ವಶಕ್ಕೆ ನೀಡಲಾಗಿದೆ.

ಈ ನಡುವೆ ತನಿಖಾ ದಳದ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸ್ವಪ್ನಾ ಹಾಗೂ ಸಂದೀಪ್​ ನಾಯರ್​ ಜಾಮೀನು ಕೋರಿ ಎನ್​ಐಎ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಆಗಸ್ಟ್​ 5ರಂದು ವಿಚಾರಣೆಗೆ ಬರಲಿದೆ.